ರಾಜ್ಯ ರಾಜಕೀಯ ಬೆಳವಣಿಗೆ ಸುತ್ತ ದೆಹಲಿಯಲ್ಲಿ ದೋಸ್ತಿ ಸರ್ಕಾರ ಗಂಭೀರ ಚರ್ಚೆ

webtech_news18 , Advertorial
ನ್ಯೂಸ್ 18 ಕನ್ನಡನವದೆಹಲಿ (ಸೆ.11): ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ದೋಸ್ತಿ ಸರ್ಕಾರ ತಲೆಕೆಡಿಸಿಕೊಂಡಿದೆ. ಈ ಕುರಿತು ದೆಹಲಿ ಕರ್ನಾಟಕ ಭವನದಲ್ಲೇ ಸರ್ಕಾರದ ಪ್ರಮುಖರು ಮಾತುಕತೆ ನಡೆಸಿದ್ದಾರೆ.


ನೆರೆ ಹಾವಳಿಯ ಪರಿಹಾರ ಕೋರಿ ಪ್ರಧಾನಿ ಮೋದಿ ಭೇಟಿಗೆ ದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಜಿ. ಪರಮೇಶ್ವರ್​, ಸಚಿವರಾದ ಡಿಕೆಶಿ, ಕೃಷ್ಣಬೈರೇಗೌಡ, ಆರ್ ವಿ ದೇಶಪಾಂಡೆ ಭೇಟಿ ನಂತರ ಕರ್ನಾಟಕ ಭವನದಲ್ಲಿ ರಾಜ್ಯ ರಾಜಕೀಯ ಬೆಳವಣಿಗೆಗಳ ಸುತ್ತ ಗಹನವಾದ ಚರ್ಚೆ ನಡೆಸಿದ್ದಾರೆ.ಜಾರಕಿಹೋಳಿ ಸಹೋದರರ ನಡೆ ಬಗ್ಗೆ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ  ನಡೆಸಿದ್ದಾರೆ. ಬಿಜೆಪಿ ಸಂಪರ್ಕದಲ್ಲಿ ಯಾವೆಲ್ಲ ಶಾಸಕರಿದ್ದಾರೆ. ಬೆಳಗಾವಿ ಕಾಂಗ್ರೆಸ್ ನಾಯಕರ ಸಮಸ್ಯೆ ಪರಿಹಾರ ಹೇಗೆ? ಡಿಕೆಶಿ ಅವರ ಐಟಿ, ಇಡಿ ದಾಳಿ ಬಗ್ಗೆ ದೋಸ್ತಿ ಸರ್ಕಾರದ ದಿಗ್ಗಜರು ಚರ್ಚೆ ನಡೆಸಿದ್ದಾರೆ.ಬಿಜೆಪಿ ನಾಯಕರ ಸಂಪರ್ಕದಲ್ಲಿರುವ ಶಾಸಕರ ಮನವೊಲಿಸುವ ಜವಾಬ್ದಾರಿಯನ್ನು ಡಿಕೆಶಿ ಹಾಗೂ ಡಿಸಿಎಂ ಜಿ.ಪರಮೇಶ್ವರ್​ ಅವರಿಗೆ ವಹಿಸಲಾಗಿದೆ. ಜೆಡಿಎಸ್ ಶಾಸಕರ ಜೊತೆ ಜೆಡಿಎಸ್ ವರಿಷ್ಟ ದೇವೇಗೌಡ ಅವರು ಮಾತುಕತೆ ನಡೆಸಿರುವ ಬಗ್ಗೆ ಪ್ರಸ್ತಾಪ ಮಾಡಲಾಗಿದ್ದು, ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ನ ಕೆಲ ಶಾಸಕರ ಮನವೊಲಿಸಿ ಎಂದು ಸಿಎಂ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.ಜಾರಕಿಹೊಳಿ ಬ್ರದರ್ಸ್​ ಅವರೊಂದಿಗೆ ಬಿಜೆಪಿ ನಿರಂತರ ಸಂಪರ್ಕದಲ್ಲಿರುವುದು ಮೈತ್ರಿ ಸರ್ಕಾರದ ನಿದ್ದೆಗೆಡಿಸಿದೆ. ಒಂದು ವೇಳೆ ಅವರು ರಾಜೀನಾಮೆ ನೀಡಿದರೆ ಅವರೊಂದಿಗೆ ಕಾಂಗ್ರೆಸ್​ನ ಹಲವು ಶಾಸಕರು ಬಿಜೆಪಿ ಸೇರುವುದು ಖಚಿತ. ಹೀಗಾಗಿ ಹೇಗಾದರೂ ಮಾಡಿ ಅವರು ಪಕ್ಷ ಬಿಟ್ಟು ಹೋಗದಂತೆ ನೋಡಿಕೊಳ್ಳುವುದು ಮೈತ್ರಿ ಸರ್ಕಾರಕ್ಕೆ ಅನಿವಾರ್ಯವಾಗಿದೆ.ಇದನ್ನು ಓದಿ: 'ಸತೀಶ್​ ಜಾರಕಿಹೊಳಿ ಮುಖ್ಯಮಂತ್ರಿಯಾಗಬೇಕು... ಡಿಕೆಶಿ ಸುಮ್ಮನಿದ್ದರೆ ಸರಿ'ಇನ್ನು ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಡಿಕೆಶಿ ಅವರ ಮೇಲೆ ಜಾರಿ ನಿರ್ದೇಶನಾಲಯ ಎಫ್​ಐಆರ್​ ದಾಖಲಿಸುವ ಸಾಧ್ಯತೆ ಬಗ್ಗೆಯೂ ಮಾತುಕತೆ ನಡೆದಿದ್ದು, ಇ.ಡಿ ಮತ್ತು ಐ.ಟಿಯಿಂದ ಪಾರಾಗುವ ಬಗೆಯ ಬಗ್ಗೆಯೂ ಗಂಭೀರ ಚರ್ಚೆ ನಡೆಸಿದ್ದಾರೆ.ಇತ್ತ ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ಜಾರಕಿಹೊಳಿ ಸಹೋದರರು ಮತ್ತು ಅವರ ಬಣದವರನ್ನು ಸೆಳೆದುಕೊಳ್ಳಲು ಸತತ ಪ್ರಯತ್ನ ಮಾಡುತ್ತಿದೆ. ರಮೇಶ್​ ಜಾರಕಿಹೊಳಿ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಮತ್ತು ಶ್ರೀರಾಮುಲು ನಿರಂತರ ಸಂಪರ್ಕದಲ್ಲಿದ್ದು, ಆಪರೇಷನ್ ಕಮಲಕ್ಕೆ ಅಣಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Trending Now