ಪುಟ್ಟ ಬಾಲಕಿ ಸಾಕ್ಷಿ ವಿಶೇಷಚೇತನ ಮಗು. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಖಾಸಗಿ ಕಂಪನಿ ಉದ್ಯೋಗಿ ಬಾಲನಗೌಡ ಹಾಗೂ ಕವಿತಾ ದಂಪತಿಯ ಎರಡನೆಯ ಮಗು. ಮೊದಲನೇ ಮಗು ಎಲ್ಲರಂತೆ ಆರೋಗ್ಯವಾಗಿದ್ದಾಳೆ. ಆದರೆ ಸಾಕ್ಷಿಗೆ ಮಾತು ಬಾರದೆ ಮೂಕಳಾಗಿದ್ದಳು. ಅದು ಗೊತ್ತಾಗಿದ್ದು ಹುಟ್ಟಿದ ಒಂದು ವರ್ಷದ ನಂತರ. ವಿಷಯ ತಿಳಿದ ಪೋಷಕರು ಆತಂಕಕ್ಕೀಡಾಗಿ ಚಿಂತಾಕ್ರಾಂತರಾದರು. ಮುಂದೇನು ಮಾಡಬೇಕು ಎಂದು ತೋಚದೆ ಕೊನೆಗೆ ವೈದ್ಯರನ್ನು ಭೇಟಿಯಾದರು. ಆದರೆ ಅಲ್ಲಿ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ರಾಷ್ಟ್ರೀಯ ಬಾಲಸ್ವಾಸ್ಥ ಕಾರ್ಯಕ್ರಮದಲ್ಲಿ ಕಿವುಡ ಹಾಗೂ ಮೂಗ ಮಗುವಿಗೆ ಚಿಕಿತ್ಸೆ ಮಾಡಿಸಬಹುದು ಎಂದು ಅಂಗನವಾಡಿ ಹಾಗೂ ಸಿಂಧನೂರು ಮಕ್ಕಳ ತಜ್ಞರಿಂದ ಗೊತ್ತಾಯಿತು. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದರು. ಈಗ ಸಾಕ್ಷಿ ಮುದ್ದು ಮುದ್ದಾಗಿ ಮಾತನಾಡುತ್ತಿದ್ದಾಳೆ. ಇದನ್ನು ಕಂಡ ಹೆತ್ತವರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.ಮಗುವಿಗೆ ಚಿಕಿತ್ಸೆಗಾಗಿ ಸರಿಸುಮಾರು 21 ಲಕ್ಷ ಖರ್ಚಾಗಿದೆ. ಈ ಎಲ್ಲಾ ಖರ್ಚನ್ನು ರಾಷ್ಟ್ರೀಯ ಬಾಲ ಸ್ವಾಸ್ಥ ಕಾರ್ಯಕ್ರಮದಿಂದ ನೀಡಲಾಗಿದೆ. ಜಗತ್ತಿನ ಕಿವುಡ ಹಾಗೂ ಮೂಗ ಮಕ್ಕಳ ಆರೋಗ್ಯ ರಾಯಭಾರಿಯಾಗಿರುವ ಆಸ್ಟ್ರೇಲಿಯಾ ವೇಗದ ಬಾಲರ್ ಸಹ ಸುಮಾರು 16 ಲಕ್ಷ ರೂಪಾಯಿ ನೀಡಿದ್ದಾರೆ. ಅಲ್ಲದೆ ಚಿಕಿತ್ಸೆಯ ನಂತರ ಮಗುವಿಗೆ ಮಾತು ಕಲಿಸಲು ಒಂದು ವರ್ಷ ಥೆರಪಿ ಇದ್ದು, ಥೆರಪಿಗೆ ಬೇಕಾಗುವಷ್ಟು ಸಾಮಗ್ರಿಗಳನ್ನು ನೀಡಿದ್ದಾರೆ. ಒಂದು ವರ್ಷ ಥೆರಪಿ ತೆಗೆದುಕೊಂಡು ಬಂದು ಸಾಕ್ಷಿ ಈಗ ಉಳಿದ ಮಕ್ಕಳಂತೆ ಮಾತನಾಡುತ್ತಿದ್ದಾಳೆ.ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಬ್ರೇಟ್ ಲೀ ಚಿಕಿತ್ಸೆ ಪಡೆದ ಮಕ್ಕಳೊಂದಿಗೆ ಸಂವಾದ ಮಾಡಿದ್ದಾರೆ. ಇಂಥ ಮಗುವಿಗೂ ಎಲ್ಲಾ ರೀತಿಯಲ್ಲಿ ಚಿಕಿತ್ಸೆ ಮಾಡಿಸಿ ಎಲ್ಲಾ ಮಕ್ಕಳಂತೆ ಬೆಳಸಬೇಕೆನ್ನುವುದಕ್ಕೆ ಸಾಕ್ಷಿ ಸಾಕ್ಷಿಯಾಗಿದ್ದಾಳೆ.