ಅಮೆರಿಕದ ವಿಶ್ವ ಜೂನಿಯರ್ ಎನ್​ಬಿಎ ಬ್ಯಾಸ್ಕೆಟ್​ಬಾಲ್​ನಲ್ಲಿ ಮಿಂಚಿದ ಇಬ್ಬರು ಮಂಡ್ಯ ಹುಡುಗಿಯರು

ಸಕ್ಕರೆನಾಡಿನ ಆ ಬಾಲಕಿಯರಿಬ್ಬರು ಹಳ್ಳಿಯ ಮುಗ್ದ ಮಕ್ಕಳು. ಹಳ್ಳಿ ಸೊಗಡಿನ ಆಟಗಳು ಬಿಟ್ಟರೆ ಇವ್ರಿಗೆ ಮತ್ತೆ ಯಾವ ಆಟವೂ ಅವರಿಗೆ ಗೊತ್ತಿರಲಿಲ್ಲ. ಇಂತಹ ಮುಗ್ಧ ಮಕ್ಕಳು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಮಿಂಚುತ್ತಿದ್ದಾರೆ. ಮಂಡ್ಯದ ಮೇಘನಾ ಹಾಗೂ ಕೆ.ಎಂ. ದೊಡ್ಡಿಯ ಹಂಸ ಅವರು ದೂರದ ಅಮೆರಿಕಾಗೆ ಹೋಗಿ ತಮ್ಮ ಕೈ ಚಳಕ ತೋರಿ ಬಂದಿದ್ದಾರೆ.

webtech_news18
- ರಾಘವೇಂದ್ರ ಗಂಜಾಮ್, ನ್ಯೂಸ್18 ಕನ್ನಡಮಂಡ್ಯ: ಮಂಡ್ಯದ ಇಬ್ಬರು ಅಪ್ಪಟ ಗ್ರಾಮೀಣ ಹೆಣ್ಮಕ್ಕಳು ಬ್ಯಾಸ್ಕೆಟ್​ಬಾಲ್ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಮೂಲಕ ಮಂಡ್ಯ ಜಿಲ್ಲೆಯಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗ್ರಾಮದ ಮೇಘನಾ ಮಂಜುನಾಥ್ ಹಾಗೂ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯ ಹಂಸ ನಂಜುಂಡಯ್ಯ ಅವರು ಭಾರತೀಯ ಕಿರಿಯರ ಬ್ಯಾಸ್ಕೆಟ್​ಬಾಲ್ ತಂಡವನ್ನು ಪ್ರತಿನಿಧಿಸಿ ಅಮೆರಿಕಗೆ ಹೋಗಿ ಮಿಂಚಿ ಬಂದಿದ್ದಾರೆ.


ಮೇಘನಾ(ಎಡ) ಮತ್ತು ಹಂಸ(ಬಲ)
ಒಂಬತ್ತನೇ ತರಗತಿಯ ಅಪ್ಪಟ ಗ್ರಾಮೀಣ ಮಂಡ್ಯದ ಪ್ರತಿಭೆಗಳಾದ ಇಬ್ಬರೂ ಬಾಲ್ಯದಿಂದಲೂ ಕ್ರೀಡೆಯಲ್ಲಿ ಮಿಂಚುತ್ತಿದ್ದವರೇ. ಸಂಬಂಧಿಕರ ಸಲಹೆ ಮೇರೆಗೆ ನಾಲ್ಕು ವರ್ಷದ ಹಿಂದೆ ಮಂಡ್ಯದ ಸ್ಪೋರ್ಟ್ಸ್ ಹಾಸ್ಟೆಲ್​ಗೆ ದಾಖಲಿಸಿದ ನಂತರ ಇಲ್ಲಿ ಕಠಿಣ ತರಬೇತಿಯ ಮೂಲಕ ಈ‌ ಇಬ್ಬರು ಬಾಲಕಿಯರು ಅಂತಾರಾಷ್ಟ್ರೀಯ ಕಿರಿಯರ ವಿಭಾಗದ ಬಾಸ್ಕೆಟ್ ಬಾಲ್ ಚಾಂಪಿಯನ್​ಶಿಪ್​ಗೆ ಆಯ್ಕೆಯಾದರು. ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ ವಿಶ್ವ ಎನ್​ಬಿಎ ಬಾಲಕಿಯರ ಕಿರಿಯರ ವಿಭಾಗದ ಬ್ಯಾಸ್ಕೆಟ್​ಬಾಲ್ ಚಾಂಪಿಯನ್​ಶಿಪ್​ನಲ್ಲಿ ಐದನೇ ಸ್ಥಾನ ಗಳಿಸಿದ ಭಾರತೀಯ ತಂಡದಲ್ಲಿ ಈ ಬಾಲಕಿಯರು ಹೈಲೈಟ್ ಆಗಿದ್ದಾರೆ.
ಭಾರತವನ್ನು ಪ್ರತಿನಿಧಿಸಿದ ಬೆಂಗಳೂರು ಬ್ಯಾಸ್ಕೆಟ್​ಬಾಲ್ ತಂಡ
ಬಾಸ್ಕೆಟ್​ಬಾಲ್ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದ ಈ ಮುಗ್ಧ ಬಾಲಕಿಯರ ಸಾಧನೆ ಹಿಂದೆ ಮಂಡ್ಯ ಕ್ರೀಡಾ ವಸತಿ ನಿಲಯದ ಬಾಸ್ಕೆಟ್​ ಬಾಲ್ ತರಬೇತುದಾರ ಭರತ್ ರಾಜ್ ಅವರ ಪರಿಶ್ರಮವಿದೆ. ಇವ್ರು ಹೇಳಿಕೊಟ್ಟ ಕೌಶಲ್ಯಗಳೇ ಈ ಬಾಲಕಿಯರು ಈ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿಸಿದೆ. ಪ್ರತಿದಿನ ಈ ಬಾಲಕಿಯರು‌ ತಮ್ಮ ಕೋಚ್ ಮೂಲಕ‌ ಕಠಿಣ ತರಬೇತಿ ಪಡೆಯುವ  ಮೂಲಕ ಕೈಚಳಕ ತೋರಿಸ್ತಾ ಇದ್ದಾರೆ. ಬೆಳಿಗ್ಗೆ 3 ಗಂಟೆ ಹಾಗೂ ಸಂಜೆ 3 ಗಂಟೆಗಳ ಕಾಲ ತರಬೇತಿ ಪಡೆಯೋ ಮೂಲಕ ಬ್ಯಾಸ್ಕೆಟ್​ಬಾಲ್​ನಲ್ಲಿ ಪರಿಣಿತಿಯನ್ನು ಪಡೆಯುವ ಮೂಲಕ ಈ ಸಾಧನೆಗೆ ಪಾತ್ರರಾಗಿದ್ದಾರೆ.ಈ ಬಾಲಕಿಯರ ಸಾಧನೆಗೆ ತರಬೇತಿದಾರ ಮೆಚ್ಚುಗೆ ವ್ಯಕ್ತಪಡಿಸಿದ್ರೆ‌, ಜಿಲ್ಲಾ ಯುವಜನ‌ ಕ್ರೀಡಾ  ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್ ಬಿ.ವಿ. ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಯುವಜನ ಸಬಲೀಕರ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಂಡ ಯೋಜನೆಯಲ್ಲಿ ಮಂಡ್ಯದ ಕ್ರೀಡಾ ಹಾಸ್ಟೆಲ್​ನಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನ ಒದಗಿಸಲಾಗಿದೆ. ಈ ಇಬ್ಬರು ಬಾಲಕಿಯರ ಸಾಧನೆಯು ಇತರ ಕಿರಿಯ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದೆ ಎಂದು ನಂದೀಶ್ ಆಶಿಸಿದ್ಧಾರೆ.ಏನಿದು ಎನ್​ಬಿಎ ಕೂಟ?
ಎನ್​ಬಿಎ ಎಂಬುದು ಅಮೆರಿಕದ ಬ್ಯಾಸ್ಕೆಟ್​ಬಾಲ್ ಸಂಸ್ಥೆಯಾಗಿದೆ. ಎನ್​ಬಿಎ ಬ್ಯಾಸ್ಕೆಟ್​ಬಾಲ್ ಚಾಂಪಿಯನ್​ಶಿಪ್ ವಿಶ್ವದ ಅತ್ಯಂತ ಕಠಿಣ ಪೈಪೋಟಿ ಇರುವ ಬ್ಯಾಸ್ಕೆಟ್​ಬಾಲ್ ಟೂರ್ನಿಯಾಗಿದೆ. ಈ ವರ್ಷ ಇದೇ ಮೊದಲ ಬಾರಿಗೆ ಜೂನಿಯರ್ ಎನ್​ಬಿಎ ಚಾಂಪಿಯನ್​ಶಿಪ್ ಆಯೋಜಿಸಲಾಗಿದೆ. ವಿಶ್ವಾದ್ಯಂತ ಬ್ಯಾಸ್ಕೆಟ್​ಬಾಲ್ ಕ್ರೀಡೆಗೆ ಜನಪ್ರಿಯತೆ ಹೆಚ್ಚಿಸುವ ಉದ್ದೇಶದಿಂದ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಎನ್​ಬಿಎ ಗಮನ ಹರಿಸಿದೆ. ಇದರ ಫಲವಾಗಿ ಭಾರತದಲ್ಲಿ ವಿವಿಧ ವಯೋಮಾನದವರಿಗೆ ಬ್ಯಾಸ್ಕೆಟ್​ಬಾಲ್ ಟೂರ್ನಮೆಂಟ್​ಗಳನ್ನ ದೇಶಾದ್ಯಂತ ಆಯೋಜಿಸಲಾಗುತ್ತದೆ. ಇಂಥ ಟೂರ್ನಮೆಂಟುಗಳ ಮೂಲಕ ಮಿಂಚಿದವರೇ ಮಂಡ್ಯದ ಮೇಘನಾ ಮತ್ತು ಹಂಸ ಅವರು. ಮೊದಲ ರಾಜ್ಯ ಮಟ್ಟದ ಟೂರ್ನಮೆಂಟಲ್ಲಿ ಮಂಡ್ಯದ ತಂಡವೇ ಪ್ರಥಮ ಬಂದಿತು. ರಾಷ್ಟ್ರಮಟ್ಟದಲ್ಲಿ ಆಡಲು ಬೆಂಗಳೂರು ತಂಡಕ್ಕೆ ಇವರಿಬ್ಬರು ಆಯ್ಕೆಯಾದರು. ರಾಷ್ಟ್ರೀಯ ಜೂನಿಯರ್ ಟೂರ್ನಿಯಲ್ಲಿ ಬೆಂಗಳೂರು ತಂಡವೇ ಚಾಂಪಿಯನ್ ಎನಿಸಿ ವಿಶ್ವ ಜೂನಿಯರ್ ಎನ್​ಬಿಎ ಟೂರ್ನಿಗೆ ಅರ್ಹತೆ ಪಡೆಯಿತು.ಅಂತೆಯೇ, ಬಾಲಕರ ವಿಭಾಗದಲ್ಲಿ ದೆಹಲಿ ತಂಡ ಚಾಂಪಿಯನ್ ಆಯಿತು. ಈ ಎರಡು ತಂಡಗಳು ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಜೂನಿಯರ್ ಎನ್​ಬಿಎ ವಿಶ್ವಚಾಂಪಿಯನ್​ಶಿಪ್​ನಲ್ಲಿ ಭಾರತವನ್ನು ಪ್ರತಿನಿಧಿಸಿದವು. ವಿಶ್ವಾದ್ಯಂತ ಒಟ್ಟು 32 ತಂಡಗಳು ಈ ಚಾಂಪಿಯನ್​ಶಿಪ್​ನಲ್ಲಿ ಪಾಲ್ಗೊಂಡವು. ಬಾಲಕರ ವಿಭಾಗದಲ್ಲಿ 16 ಹಾಗೂ ಬಾಲಕಿಯರ ವಿಭಾಗದಲ್ಲಿ 16 ತಂಡಗಳು ಇದರಲ್ಲಿದ್ದವು. ಇದರಲ್ಲಿ 8 ತಂಡಗಳು ಅಮೆರಿಕದವಾಗಿದ್ದರೆ, ಉಳಿದ 8 ತಂಡಗಳು ಇತರ ದೇಶಗಳದ್ದಾಗಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ತಂಡ ಆಯ್ಕೆಯಾಗಿದ್ದು ಒಂದು ಹೆಮ್ಮೆಯ ವಿಚಾರವೇ.ಆಗಸ್ಟ್ ಎರಡನೇ ವಾರದಲ್ಲಿ ನಡೆದ ಇಂಥ ಕಠಿಣಾತಿಕಠಿಣ ಹಾಗೂ ಅತ್ಯುನ್ನತ ಟೂರ್ನಿಯಲ್ಲಿ ಬೆಂಗಳೂರು ಬಾಲಕಿಯರ ತಂಡ 5ನೇ ಸ್ಥಾನ ಗಳಿಸಿದ್ದು ಮಹತ್​ಸಾಧನೆಯೇ ಸರಿ. ಮಂಡ್ಯದ ಈ ಇಬ್ಬರು ಗ್ರಾಮೀಣ ಪ್ರತಿಭೆಗಳ ಸಾಧನೆಗೆ ಎಲ್ಲೆಡೆಯಿಂದ ‌ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ. ಇವರ ಈ ಸಾಧನೆ ಮತ್ತಷ್ಟು ಹೆಚ್ಚಾಗಿ ಮಂಡ್ಯ ಜಿಲ್ಲೆಯ ಕೀರ್ತಿ ಪತಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು‌ ಪಸರಿಲಿ ಅನ್ನೋದೆ ನಮ್ಮ‌ ಆಶಯ‌.

Trending Now