ಕೆಪಿಎಲ್ 2018 ಫೈನಲ್: ಉತ್ತಪ್ಪ ಪಡೆಗೆ ಹೀನಾಯ ಸೋಲು: 2ನೇ ಬಾರಿ ಚಾಂಪಿಯನ್ ಆದ ಬಿಜಾಪುರ ಬುಲ್ಸ್

webtech_news18 , Advertorial
ನ್ಯೂಸ್ 18 ಕನ್ನಡಮೈಸೂರು (ಸೆ. 06): ಕರ್ನಾಟಕ ಪ್ರೀಯರ್ ಲೀಗ್​ನ ಫೈನಲ್ ಕಾದಾಟದಲ್ಲಿ ಬೆಂಗಳೂರು ಬ್ಲಾಸ್ಟರ್ಸ್​ ವಿರುದ್ಧ ಬಿಜಾಪುರ ಬುಲ್ಸ್​ ತಂಡ ಭರ್ಜರಿ ಜಯ ಸಾಧಿಸಿದ್ದು ಕೆಪಿಎಲ್​ನ 2018ರ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಬಿಜಾಪುರ ಬೌಲಿಂಗ್ ದಾಳಿಗೆ ತತ್ತರಿಸಿದ ಉತ್ತಪ್ಪ ಪಡೆ ಅಂತಿಮ ಪಂದ್ಯದಲ್ಲಿ ಎಡವಿದೆ.


ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಬೆಂಗಳೂರು ಆರಂಭದಿಂದಲೇ ವಿಕೆಟ್ ಕಳೆದುಕೊಂಡೆ ಸಾಗೀತು. ಆರಂಭಿಕ ಆಟಗಾರ ಕೆಬಿ ಪವನ್ 22 ರನ್ ಬಾರಿಸಿದ್ದು ತಂಡದಲ್ಲಿನ ಆಟಗಾರರ ಗರಿಷ್ಠ ಸ್ಕೋರ್ ಆಗಿತ್ತು. ನಾಯಕ ರಾಬಿನ್ ಉತ್ತಪ್ಪ ಕೂಡ ನಾಯಕನ ಆಟವಾಡದೆ ಕೇವಲ 9 ರನ್​​ಗೆ ಪೆವಿಲಿಯನ್ ಸೇರಿದ್ದು, ತಂಡದಲ್ಲಿನ ಆತ್ಮವಿಶ್ವಾಸವನ್ನ ಇನ್ನೂ ಕುಗ್ಗಿಸಿತು. ಅಂತಿಮವಾಗಿ 20 ಓವರ್​ಗೆ ತನ್ನ 10 ವಿಕೆಟ್ ಕಳೆದುಕೊಂಡು 101 ರನ್​ ಗಳಿಸಲಷ್ಟೇ ಶಕ್ತವಾಯಿತು. ಬುಲ್ಸ್ ಪರ ಕೆಪಿ ಅಪ್ಪಣ್ಣ 3 ವಿಕೆಟ್ ಕಿತ್ತರೆ, ಭವೇಶ್ ಹಾಗೂ ನವೀನ್ ತಲಾ 2 ವಿಕೆಟ್ ಪಡೆದರು.ಇತ್ತ 102 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಬಿಜಾಪುರ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲನೇ ವಿಕೆಟ್​​ಗೆ ನವೀನ್ ಹಾಗೂ ನಾಯಕ ಭರತ್ ಚಿಪ್ಲಿ 47 ರನ್​ಗಳ ಜೊತೆಯಾಟ ನೀಡಿದರು. 19 ರನ್ ಗಳಿಸಿರುವಾಗ ಚಿಪ್ಲಿ ಔಟ್ ಆದರೆ, 43 ರನ್ಬಾರಿಸಿ ನವೀನ್ ನಿರ್ಗಮಿಸಿದರು. ಇದರ ಬೆನ್ನಲ್ಲೆ ಶ್ರೀಕಾಂತ್ ಕೂಡ 7 ರನ್​ಗೆ ಔಟ್ ಆದರು. ಆದರೆ ಅಬ್ಬಾಸ್ ಹಾಗೂ ಕೆಎನ್ ಭರತ್ ಜೊತೆಗೂಡಿ 13.5 ಓವರ್​​ನಲ್ಲೇ 3 ವಿಕೆಟ್ ಕಳೆದುಕೊಂಡು 106 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಬ್ಬಾಸ್ 15 ಹಾಗೂ ಕೆಎನ್ ಭರತ್ 21 ಬಾರಿಸಿ ಅಜೇಯರಾಗಿ ಉಳಿದರು.ಈ ಮೂಲಕ 2018ರ ಕರ್ನಾಟಕ ಪ್ರೀಮಿಯರ್ ಲೀಗ್​​ನ ಚಾಂಪಿಯನ್ ಆಗಿ ಬಿಜಾಪುರ ಬುಲ್ಸ್ ಹೊರ ಹೊಮ್ಮಿದ್ದು, ಎರಡನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದೆ.ಪಂದ್ಯ ಶ್ರೇಷ್ಠ: ನವೀನ್ ಎಂಜಿಸರಣಿ ಶ್ರೇಷ್ಠ: ಭರತ್ ಚಿಪ್ಲಿ

Trending Now