ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆ ಗೆಲುವು : 5 ಪಂದ್ಯಗಳ ಸರಣಿಯನ್ನ 4-1 ರಿಂದ ಗೆದ್ದ ಇಂಗ್ಲೆಂಡ್

webtech_news18 , Advertorial
ನ್ಯೂಸ್ 18 ಕನ್ನಡ ಲಂಡನ್(ಸೆ. 11): ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ದಿಟ್ಟ ಹೋರಾಟದ ಪ್ರದರ್ಶನ ತೋರಿದೆ. ಆಂಗ್ಲರು ನೀಡಿದ ಬೃಹತ್ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಪರ ಕನ್ನಡಿಗ ಕೆ.ಎಲ್​. ರಾಹುಲ್ ಹಾಗೂ ರಿಷಭ್ ಪಂತ್ ಭರ್ಜರಿ ಸೆಂಚುರಿ ಸಿಡಿಸಿ ತಕ್ಕ ಉತ್ತರ ನೀಡಿದ್ರು. ಆದರೆ ಕೊನೆಯಲ್ಲಿ ಆದ ನಾಟಕೀಯ ಬೆಳವಣಿಗೆ ಭಾರತಕ್ಕೆ ಗೆಲುವಿನಿಂದ ದೂರ ಮಾಡಿತು.


ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮರು ಹೋರಾಟ ಪ್ರದರ್ಶಿಸಿದೆ. 4ನೇ ದಿನದಾಟದಂತ್ಯಕ್ಕೆ ಟಾಪ್ ಆರ್ಡರ್ ನ ಮೂವರು ಪ್ರಮುಖ ಬ್ಯಾಟ್ಸ್​ಮನ್​ಗಳನ್ನು ಕಳೆದುಕೊಂಡಿದ್ದ ಭಾರತ ಮತ್ತೊಂದು ಟೆಸ್ಟ್ ಪಂದ್ಯ ಸೋಲುವತ್ತ ಹೆಜ್ಜೆ ಇಟ್ಟಿತ್ತು. ಆದರೆ ಅಂತಿಮ ದಿನದಾಟದಲ್ಲಿ ಭಾರತದ ಬ್ಯಾಟ್ಸ್​ಮನ್​ಗಳ ಶ್ರೇಷ್ಠ ಪ್ರದರ್ಶನ ತೋರಿದರು. ಅದರಲ್ಲೂಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ರಿಷಭ್ ಪಂತ್ ಭರ್ಜರಿ ಆಟವನ್ನು ಆಡಿದರು.ಅಂತಿಮ ದಿನದಾಟದ ಆರಂಭದಲ್ಲೇ ಕೊಹ್ಲಿ ಪಡೆಗೆ ನಿರಾಸೆ ಕಾದಿತ್ತು. ಯಾಕಂದರೆ ಉಪನಾಯಕ ಅಜಿಂಕ್ಯಾ ರಹಾನೆ 37 ರನ್​ಗಳಿಗೆ ವಿಕೆಟ್ ಒಪ್ಪಿಸಿದರು . ಇದರ ಬೆನ್ನಲ್ಲೇ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದ ಹನುಮ ವಿಹಾರಿ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಇದು ಭಾರತಕ್ಕೆ ನುಂಗಲಾರದ ತುತ್ತಾಯಿತು. ಆದರೆ ಆಂಗ್ಲರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದು ಕೆ.ಎಲ್ ರಾಹುಲ್ ಹಾಗೂ ರಿಷಭ್ ಪಂತ್ ಅತ್ಯದ್ಭುತ ಇನ್ನಿಂಗ್ಸ್ ಕಟ್ಟಿದ ಇಬ್ಬರು 6ನೇ ವಿಕೆಟ್​​ಗೆ ದ್ವಿಶತಕದ ಜೊತೆಯಾಟವಾಡುವ ಮೂಲಕ ದಿಟ್ಟ ಹೋರಾಟ ಪ್ರದರ್ಶಿಸಿದರು.ಕೆ.ಎಲ್.ರಾಹುಲ್ ಟೆಸ್ಟ್ ಕ್ರಿಕೆಟ್​ನಲ್ಲಿ 5ನೇ ಶತಕ ದಾಖಲಿಸಿದರೆ, ಮತ್ತೊಂದು ಬದಿಯಲ್ಲಿ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕಕ್ಕೆ ಮುತ್ತಿಟ್ಟರು. ಅದೂ ಕೂಡ ಸಿಕ್ಸರ್ ಸಿಡಿಸಿ ಅನ್ನೋದು ಬಲು ವಿಶೇಷವಾಗಿತ್ತು. ಹೀಗೆ ಬಲಿಷ್ಠವಾಗಿ ಮುನ್ನುಗ್ಗುತ್ತಿದ್ದ ಈ ಜೋಡಿಯನ್ನ ಬ್ರೇಕ್ ಮಾಡಿದ್ದು ಆದಿಲ್ ರಶೀದ್. 149 ರನ್ ಗಳಿಸಿದ್ದಾಗ ರಾಹುಲ್ ರಶೀದ್ ಸ್ಪಿನ್ ಮರ್ಮ ಅರಿಯದೇ ಬೌಲ್ಡ್ ಆದರು.ಈ ಹಿಂದೆ ಇದೇ ರಶೀದ್ ವಿರುದ್ಧ 2016ರಲ್ಲಿ 199 ರನ್​ಗೆ ರಾಹುಲ್ ಔಟಾಗಿದರು. ಇನ್ನು ರಾಹುಲ್ ಔಟಾದ ಬೆನ್ನಲ್ಲೇ ಮತ್ತೊಬ್ಬ ಶತಕದ ಹೀರೋ ರಿಷಭ್ ಪಂತ್ ಕೂಡ ಆತುರದ ರನ್​ಗೆ ಕೈ ಹಾಕಿ ರಶೀದ್​ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಕೊನೆ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 118 ರನ್​ಗಳಿಂದ ಗೆದ್ದು ಬೀಗಿದೆ. 5 ಪಂದ್ಯಗಳ ಸರಣಿ 4-1ರಿಂದ ಇಂಗ್ಲೆಂಡ್ ಪಾಲಾಗಿದೆ.

Trending Now