ಮುಂದುವರೆದ ಭಾರತೀಯ ಬ್ಯಾಟ್ಸ್​ಮನ್​ಗಳ ಕಳಪೆ ಆಟ: 2ನೇ ದಿನದಾಟದ ಅಂತ್ಯಕ್ಕೆ ಭಾರತ 174/6

webtech_news18 , Advertorial
ನ್ಯೂಸ್ 18 ಕನ್ನಡಲಂಡನ್​​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತೊಮ್ಮೆ ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳ ವೈಫಲ್ಯ ಅನುಭವಿಸಿದೆ. ಪರಿಣಾಮ ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ 6 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿದ್ದು, ಇನ್ನೂ 158 ರನ್​ಗಳ ಹಿನ್ನಡೆಯಲ್ಲಿದೆ.

ಮೊದಲ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 198 ರನ್​​​ಗಳಿಸಿದ್ದ ಇಂಗ್ಲೆಂಡ್, ಇಂದು ಜಾಸ್ ಬಟ್ಲರ್ ಹಾಗೂ ಸ್ಟುವರ್ಟ್ ಬ್ರಾಡ್ ಉತ್ತಮ ಜೊತೆಯಾಟದ ನೆರವಿನಿಂದ 332 ರನ್ ಕಲೆಹಾಕಿತು. ಜಾಸ್ ಬಟ್ಲರ್ ತಮ್ಮ ಹುಟ್ಟುಹಬ್ಬದ ದಿನದಂದು 89 ರನ್ ಸಿಡಿಸಿ ಮಿಂಚಿದರು. ಪರಿಣಾಮ ಇಂಗ್ಲೆಂಡ್ 300ರ ಗಡಿ ದಾಟಿ 332ರನ್ ಗಳಿಸಿತು. ಭಾರತ ಪರ ರವೀಂದ್ರ ಜಡೇಜಾ 4 ವಿಕೆಟ್ ಕಿತ್ತು ಮಿಂಚಿದರೆ, ಇಶಾಂತ್ ಶರ್ಮಾ ಹಾಗೂ ಜಸ್​ಪ್ರೀತ್ ಬುಮ್ರಾ ತಲಾ 3 ವಿಕೆಟ್ ಪಡೆದರು.332 ಮೊತ್ತ ಬೆನ್ನತ್ತಿದ ಭಾರತ ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್​ಗೆ ರಾಹುಲ್​​​-ಪೂಜಾರ ಉತ್ತಮ ಜೊತೆಯಾಟದ ನಿರೀಕ್ಷೆಯನ್ನು ಹುಸಿಗೊಳಿಸಿದರು. ಕೆ.ಎಲ್ ರಾಹುಲ್ 37ರನ್​ಗಳಿಸಿದ್ದಾಗ ಸ್ಯಾಮ್ ಕರನ್​ಗೆ ವಿಕೆಟ್ ಒಪ್ಪಿಸಿದರೆ, ಉತ್ತಮವಾಗೇ ಆಡುತ್ತಿದ್ದ ಪೂಜಾರ(37) ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್​ನಲ್ಲಿ ಕೀಪರ್​​ಗೆ ಕ್ಯಾಚಿತ್ತು ಪೆವಿಲಿಯನ್​ ಸೇರಿಕೊಂಡರು. ಇದರ ಬೆನ್ನಲ್ಲೆ ಅಜಿಂಕ್ಯ ರಹಾನೆ ಸೊನ್ನೆ ಸುತ್ತಿದ್ದು ಭಾರತಕ್ಕೆ ಮತ್ತಷ್ಟು ಹೊಡೆತ ನೀಡಿತು. ಬಳಿಕ ನಾಯಕ ವಿರಾಟ್​ ಕೊಹ್ಲಿ ಹಾಗೂ ಹನುಮ ವಿಹಾರಿ ಎಚ್ಚರಿಕೆಯ ಇನ್ನಿಂಗ್ಸ್​ ಕಟ್ಟಲು ಮುಂದಾದರು. ಆದರೆ ಕೊಹ್ಲಿ 49 ರನ್​ಗೆ ಔಟ್ ಆಗುವ ಮೂಲಕ ತಂಡಕ್ಕೆ ಆಘಾತ ನೀಡಿದರೆ, ಕೊಹ್ಲಿ ಬೆನ್ನಲ್ಲೆ ರಿಷಭ್ ಪಂತ್ 5 ರನ್​ಗೆ ಪೆವಿಲಿಯನ್ ಹಾದಿ ಹಿಡಿದರು.ಅಂತಿಮವಾಗಿ ಭಾರತ 2ನೇ ದಿನದಾಟದ ಅಂತ್ಯಕ್ಕೆ ತನ್ನ 6 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿದೆ. ಮೊದಲ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಹನುಮ ವಿಹಾರಿ 25 ಹಾಗೂ ರವೀಂದ್ರ ಜಡೇಜಾ 8 ರನ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ ಹಾಗೂ ಬೆನ್ ಸ್ಟೋಕ್ಸ್ ತಲಾ 2 ವಿಕೆಟ್ ಕಿತ್ತರೆ, ಸ್ಟುವರ್ಟ್ ಬ್ರಾಡ್ ಹಾಗೂ ಸ್ಯಾಮ್ ಕುರ್ರನ್ 1 ವಿಕೆಟ್ ಪಡೆದರು.

Trending Now