ಕೆಎಲ್ ರಾಹುಲ್, ರಿಷಭ್ ಪಂತ್ ಹೋರಾಟ; ಆಂಗ್ಲರ ಎದುರು ಟೀಮ್ ಇಂಡಿಯಾ ಫೈಟ್ ಬ್ಯಾಕ್

webtech_news18
- ನ್ಯೂಸ್18 ಕನ್ನಡಲಂಡನ್(ಸೆ. 11): ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿರುವ ಭಾರತಕ್ಕೆ ಮಾನ ಉಳಿಸಲು ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಹೋರಾಡುತ್ತಿದ್ಧಾರೆ. ಇಡೀ ಇಂಗ್ಲೆಂಡ್ ಪ್ರವಾಸದಲ್ಲಿ ಒಂದೇ ಒಂದು ಅರ್ಧಶತಕ ಭಾರಿಸಲು ವಿಫಲರಾಗಿದ್ದ ಕೆಎಲ್ ರಾಹುಲ್ ಅವರು ಪ್ರವಾಸದ ಕೊನೆಯ ಇನ್ನಿಂಗ್ಸಲ್ಲಿ ಭರ್ಜರಿ ಶತಕ ದಾಖಲಿಸಿದ್ದಾರೆ. ಆದರೆ, ತಂಡವನ್ನು ದಡ ಸೇರಿಸುವ ಗಾದಿ ಇನ್ನೂ ತುಂಬಾ ದೂರವಿದೆ. ಗೆಲ್ಲಲು 464 ರನ್ ಗುರಿ ಪಡೆದಿರುವ ಭಾರತ ತಂಡ 300 ರನ್​ ಗಡಿಯತ್ತ ಮುನ್ನುಗ್ಗುತ್ತಿದೆ. ಕೆಎಲ್ ರಾಹುಲ್ ಅವರಿಗೆ ರಿಷಭ್ ಪಂತ್ ಒಳ್ಳೆಯ ಸಾಥ್ ನೀಡಿದ್ದಾರೆ. ಇವರಿಬ್ಬರು 6ನೇ ವಿಕೆಟ್​ಗೆ 150ಕ್ಕೂ ಹೆಚ್ಚು ರನ್​ ಸೇರಿಸಿದ್ದಾರೆ. ಕೆಎಲ್ ರಾಹುಲ್ 150ರ ಗಡಿ ಸಮೀಪವಿದ್ದರೆ, ಪಂತ್ ಚೊಚ್ಚಲ ಶತಕ ದಾಖಲಿಸಿದ್ದಾರೆ.


ಇಂದು 3 ವಿಕೆಟ್ ನಷ್ಟಕ್ಕೆ 58 ರನ್​ಗಳೊಂದಿಗೆ ಕೊನೆಯ ದಿನದಾಟ ಪ್ರಾರಂಭಿಸಿದ ಭಾರತಕ್ಕೆ ಕೆಎಲ್ ರಾಹುಲ್ ಮತ್ತು ಅಜಿಂಕ್ಯ ರಹಾನೆ ಉತ್ತಮ ಜೊತೆಯಾಟ ಕೊಟ್ಟರು. ಇಬ್ಬರೂ 4ನೇ ವಿಕೆಟ್​ಗೆ 118 ರನ್ ಸೇರಿಸಿದರು. ಭಾರತಕ್ಕೆ ಉತ್ತಮ ಜೊತೆಯಾಟ ಸಿಕ್ಕಿ ತಂಡದ ಮಾನ ಉಳಿಯಬಹುದೆಂಬ ಆಸೆ ನೆಡುವಷ್ಟರಲ್ಲಿ ರಹಾನೆ ಔಟಾದರು. ಅದಾದ ಕೆಲ ಹೊತ್ತಲ್ಲೇ ಗಗನ ಹನುಮ ವಿಹಾರಿ ಹಾಗೆ ಬಂದು ಹೀಗೆ ಹೋದರು. ಮೊದಲ ಇನ್ನಿಂಗ್ಸಲ್ಲಿ ಆಕರ್ಷಕ ಅರ್ಧಶತಕ ಗಳಿಸಿದ್ದ ಆಂಧ್ರದ ಹುಡುಗ 2ನೇ ಇನ್ನಿಂಗ್ಸಲ್ಲಿ ಶೂನ್ಯ ಸಂಪಾದನೆ ಮಾಡಿದರು. ಅದಾದ ನಂತರ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿ ತಂಡವನ್ನು ಅಪಾಯದಿಂದ ಪಾರು ಮಾಡುತ್ತಿದ್ದಾರೆ.ಪಂದ್ಯ ಮುಗಿಯಲು ಇನ್ನೂ 36 ಓವರ್ ಬಾಕಿ ಇದೆ. ಗೆಲ್ಲಲು ಇನ್ನೂ 182 ರನ್ ಅಗತ್ಯವಿದೆ. ಒಂದು ಹಂತದಲ್ಲಿ ಭಾರತಕ್ಕೆ ಸೋಲು ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂಬಂತಿದ್ದ ಸ್ಥಿತಿಯಿಂದ ಕೆಎಲ್ ರಾಹುಲ್ ಮೂಲಕ ತಂಡವು ಫೀನಿಕ್ಸ್​ನಂತೆ ಕಂಬ್ಯಾಕ್ ಮಾಡಿದೆ. ಫಲಿತಾಂಶ ಏನು ಬೇಕಾದರೂ ಆಗಬಹುದು ಎಂಬ ಸುಳಿವು ಸಿಕ್ಕಿದೆ. ಭಾರತವು ಗೆದ್ದರೂ ಗೆಲ್ಲಬಹುದು ಎಂಬಂತಹ ಸ್ಥಿತಿ ಇದೆ.ಇಂಗ್ಲೆಂಡ್ ತಂಡ 5 ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ 3-1ರಿಂದ ಮುಂದಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಟಿ20 ಸರಣಿ ಗೆದ್ದ ಬಳಿಕ ಭಾರತವು ಆತಿಥೇಯರಿಗೆ ಏಕದಿನ ಕ್ರಿಕೆಟ್ ಸರಣಿ ಹಾಗೂ ಟೆಸ್ಟ್ ಸರಣಿ ಎರಡನ್ನು ಸೋತಿದೆ. ಆದರೆ, ಟೆಸ್ಟ್ ಸರಣಿಯಲ್ಲಿ 1-4ರಿಂದ ಸೋತು ಕಳೆದುಕೊಳ್ಳುವ ಮಾನವನ್ನು ಉಳಿಸಿಕೊಳ್ಳಲು ಭಾರತೀಯರು ಕೊನೆಯ ಪ್ರಯತ್ನ ಮಾಡುತ್ತಿದ್ದಾರೆ.

Trending Now