ಸಿಂಪಲ್ಲಾಗ್​ ಒಂದ್​ ಪೆಟ್ರೋಲ್​ ಸ್ಟೋರಿ | ನಿರ್ದೇಶಕರು; ಸರ್ಕಾರಗಳು, ನಿರ್ಮಾಪಕರು: ಒಪೆಕ್​ ರಾಷ್ಟ್ರ

ಜಾಗತಿಕ ಆರ್ಥಿಕತೆಯನ್ನು ಬಂಗಾರ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾಗ 'ಪೆಟ್ರೊಲಿಯಂ ರಶ್​', ಮಾಡಿದ್ದು ನೆಪೊಲಿಯನ್​ ಆಫ್​ ಆಯಿಲ್​ ಹೆನ್ರಿ ಡೆಟರಿಂಗ್​ ಮತ್ತು ಸೆವೆನ್​ ಸಿಸ್ಟರ್ಸ್​. ಕಚ್ಚಾ ತೈಲಗಳು ಬೆಳೆದು ಬಂದ ಹಾದಿ ಮತ್ತು ಸಪ್ತ ಸಹೋದರಿಯರ ಕಥೆ ಈ ಸಂದರ್ಭದಲ್ಲಿ ತಿಳಿಯುವ ಅನಿವಾರ್ಯತೆಯಿದೆ. 

Sharath Sharma Kalagaru , Advertorial
ಶರತ್​ ಶರ್ಮ ಕಲಗಾರುಬೆಂಗಳೂರು: ಕಳೆದೊಂದು ದಶಕದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಗಗನಕ್ಕೂ ಏರಿದೆ, ಪಾತಾಳಕ್ಕೂ ಕುಸಿದಿದೆ. ಅದಕ್ಕೆ ತಕ್ಕಂತೆ ಪ್ರಪಂಚದದ್ಯಾಂತ ತೈಲ ಬೆಲೆಗಳು ಒಮ್ಮೊಮ್ಮೆ ಹೆಚ್ಚು, ಕಡಿಮೆ ಆಗುತ್ತಲೇ ಇದೆ. ಪೆಟ್ರೋಲ್​ ಬೆಲೆ ಏರಿಕೆಯಾಗಲು ಕಾರಣಗಳೇನು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುವ ಬದಲಾವಣೆಗಳಿಂದ ಮತ್ತು ದೇಶದೊಳಗಿನ ತೆರಿಗೆಗಳಿಂದ ಕಾಲಕಾಲಕ್ಕೆ ಏರಿಕೆಯಾದ ತೈಲಬೆಲೆ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ.


ಕಚ್ಚಾ ತೈಲದ ಉತ್ಪಾದನೆಯ ಮೇಲೆ ಕಡಿವಾಣ ಹಾಕುವ ಕುರಿತು ಕಳೆದ ಹಲವು ವರ್ಷಗಳಿಂದ ಕಸರತ್ತುಗಳು ನಡೆಯುತ್ತಲೇ ಇವೆ. ಅಣ್ವಸ್ತ್ರ ನಿಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇರಾನ್ ಕಚ್ಚಾ ತೈಲ ಉತ್ಪಾದನೆಗೆ ಇದ್ದ ಕಡಿವಾಣಗಳು ಕಳಚಿಹೋಗಿವೆ. ಇದೇ ವೇಳೆ, ಸೌದಿ ಅರೇಬಿಯಾ ಕೂಡ ತನ್ನ ಉತ್ಪಾದನೆಯನ್ನು ತಗ್ಗಿಸುವುದಕ್ಕೆ ಹಿಂಜರಿಯುತ್ತಿದೆ. ಒಂದು ವೇಳೆ, ತನ್ನ ಉತ್ಪಾದನೆಗೆ ಕಡಿವಾಣ ಹಾಕಿದರೆ, ಸೌದಿಗಿರುವ ಗಿರಾಕಿಗಳು ಒಪೆಕ್ ಹೊರಗಿರುವ ಅಮೆರಿಕ ಪಾಲಾಗಬಹುದು ಎಂಬ ಆತಂಕವನ್ನು ಅದು ವ್ಯಕ್ತಪಡಿಸಿತ್ತು.ಈ ಹಿಂದೆ ನಡೆದ ಒಪೆಕ್ ರಾಷ್ಟ್ರಗಳ ಸಭೆಗೆ ಸೌದಿ ಗೈರುಹಾಜರಾಗಿತ್ತು. ಇರಾನ್ ಯಾವುದೇ ಒಪ್ಪಿಗೆ ಸೂಚಿಸದೆ ಸಭೆಯಿಂದ ಹೊರನಡೆದಿತ್ತು. ಈ ಹಿನ್ನೆಲೆಯಲ್ಲಿ, ಕಚ್ಚಾ ತೈಲ ಉತ್ಪಾದನೆ ಮೇಲೆ ಕಡಿವಾಣ ಹಾಕಿಯೇ ತೀರಬೇಕು ಎಂದು ಹೊರಟಿದ್ದ ಒಪೆಕ್ ನಡೆಗೆ ಭಾರೀ ಹಿನ್ನಡೆಯಾಗಿತ್ತು.ಕಚ್ಚಾ ತೈಲ ಉತ್ಪಾದನೆಯಲ್ಲಿ ಕಡಿವಾಣಗಳಿಲ್ಲದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಇಳಿಯಲು ಶುರುವಾಗಿತ್ತು. ಇದು ಈಕ್ವೆಡಾರ್ ಹಾಗೂ ವೆನಿಝುವೆಲಾ ದೇಶಗಳ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರಿತ್ತು. 1940ರಿಂದ ಈಚೆಗೆ ಚೇತರಿಸಿಕೊಂಡಿದ್ದ ವೆನಿಝುವೆಲಾದ ಆರ್ಥಿಕತೆ ಈ ವರ್ಷ ಶೇ. 10ರಷ್ಟು ಕುಸಿದಿದೆ.ತೈಲ ಉತ್ಪಾದನಾ ರಾಷ್ಟ್ರಗಳಾದ ಅಲ್ಜೇರಿಯಾ, ಅಂಗೋಲ, ಈಕ್ವೆಡಾರ್, ಇಂಡೋನೇಷಿಯಾ, ಇರಾನ್, ಇರಾಕ್, ಕುವೈತ್, ಲಿಬಿಯಾ, ನೈಜೀರಿಯಾ, ಕತಾರ್, ಸೌದಿ ಅರೇಬಿಯಾ, ಯುಎಇ ಹಾಗೂ ವೆನಿಝುವೇಲಾ ಒಪೆಕ್ ಸೇರಿದ ರಾಷ್ಟ್ರಗಳು.ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2014ರಲ್ಲಿ ಇತಿಹಾಸ ರಚಿಸಿ, ದೇಶದ ಅಧಿಕಾರ ಚುಕ್ಕಾಣಿ ಹಿಡಿದಾಗ ಒಂದು ಬ್ಯಾರೆಲ್​ ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದ್ದಿದ್ದು, 106.37 ಯು.ಎಸ್​. ಡಾಲರ್​ಗಳು. ಆದರೆ ಅದಾದ ನಂತರ ಕಚ್ಚಾ ತೈಲದ ಬೆಲೆ ಭಾರೀ ಇಳಿಕೆ ಕಂಡಿತ್ತು. ಸದ್ಯದ ಒಂದು ಬ್ಯಾರೆಲ್​ ಕಚ್ಚಾ ತೈಲದ ಬೆಲೆ 69.82 ಯು.ಎಸ್​. ಡಾಲರ್​ಗಳು. ಹೀಗಿದ್ದೂ ಭಾರತೀಯರು ಒಂದು ಲೀಟರ್​ ಪೆಟ್ರೋಲ್​ಗೆ ದೇಶಾದ್ಯಂತ ಸರಾಸರಿ ರೂ. 83 ಮತ್ತು ಡೀಸೆಲ್​ಗೆ ರೂ. 76 ಬೆಲೆ ತೆರುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಭಾರತದ ತೆರಿಗೆ ವ್ಯವಸ್ಥೆ ಮತ್ತು ಜನಸಾಮಾನ್ಯರ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಇಲ್ಲದ ಕಾಳಜಿ ಎಂದರೆ ತಪ್ಪಾಗಲಾರದು.ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡು ಮತ್ತೀಗ ಮೇಲೇರುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿದ್ದ ಕಚ್ಚಾ ತೈಲದ ಬೆಲೆಗಿಂತಲೂ ಸುಮಾರು ಅರ್ಧ ಕಡಿಮೆಯಿದ್ದರೂ, ಪೆಟ್ರೋಲ್​, ಡೀಸೆಲ್​ ಮತ್ತು ಅಡುಗೆ ಅನಿಲದ ಬೆಲೆ ಗಗನಕ್ಕೇರಲು ಏನು ಕಾರಣ? ಇದು ಇವತ್ತು ಹೊರಗಿನ ವಿದ್ಯಮಾನಗಳ ಕುರಿತು ಕನಿಷ್ಠ ಜ್ಞಾನ ಇರುವ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಪ್ರಶ್ನೆ.ಕಚ್ಚಾ ತೈಲ ಉತ್ಪಾದನಾ ರಾಷ್ಟ್ರಗಳ ಜತೆಗೆ ಅಭಿವೃದ್ಧಿ ಹೊಂದಿರುವ ದೇಶಗಳೂ ಪೈಪೋಟಿಗೆ ಬಿದ್ದಂತೆ ಭೂಮಿಯಾಳದಿಂದ ತೈಲವನ್ನು ಹೊರತೆಗೆಯುತ್ತಿವೆ. ಹೀಗಾಗಿ 2014ರಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲಕ್ಕೆ ಇದ್ದ 106 ಡಾಲರ್ (7,632 ರೂಪಾಯಿಗಳು - ಇಂದಿನ ರೂಪಾಯಿ - ಡಾಲರ್​ ಬೆಲೆಗೆ ಅನುಗುಣವಾಗಿ) ಇಂದು 69 ಡಾಲರ್ (5,000 ರೂಪಾಯಿ)ಗೆ ಇಳಿಕೆ ಕಂಡಿದೆ. ಅಂದರೆ ಶೇ. 25ರಷ್ಟು ಕಚ್ಚಾ ತೈಲದ ಬೆಲೆ ಕಡಿಮೆಯಾಗಿದೆ. ಕಳೆದೆರಡು ವರ್ಷಗಳಲ್ಲಿ ಕಚ್ಚಾ ತೈಲ ಕೇವಲ 25 ಡಾಲರ್​ಗಳಿಗೂ ಇಳಿದಿತ್ತು. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳಾಗಿರಲಿಲ್ಲ, ಬದಲಿಗೆ ಹೆಚ್ಚಳವಾಗುತ್ತಲೇ ಇತ್ತು.ಕಾರಣ ಏನು?:ಕಳೆದ 11 ವರ್ಷಗಳಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದಲ್ಲಿ ಕಚ್ಚಾ ತೈಲದ ಬೆಲೆ ಇಳಿದಿದೆ. ಆದರೆ, ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವ್ಯಾಟ್, ಎಕ್ಸೈಸ್ ಡ್ಯೂಟಿಗಳನ್ನು ಹೆಚ್ಚಿಸಿವೆ. ಸದ್ಯ ಸರಕಾರದ ಆದಾಯದಲ್ಲಿ ಅತೀ ದೊಡ್ಡ ಪಾಲನ್ನು ನೀಡುತ್ತಿರುವುದು ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಮಾರಾಟ. ಸುಮಾರು 17 ಸಾವಿರ ಕೋಟಿ ರೂಪಾಯಿಗಳನ್ನು ಸರಕಾರ ಪ್ರತಿ ವರ್ಷ ಇಂಧನ ಮಾರಾಟದ ತೆರಿಗೆಯಿಂದ ಗಳಿಸುತ್ತಿದೆ. ಹೆಚ್ಚು ಕಡಿಮೆ ಶೇ. 35ರಷ್ಟು ಆದಾಯದ ಪಾಲು ಇದೊಂದು ವಿಭಾಗದಿಂದ ಬರುತ್ತಿದೆ. ಸದ್ಯ ಇಂಧನ ಮಾರಾಟದಿಂದ ಬರುತ್ತಿರುವ ಆದಾಯಕ್ಕೆ ಪರ್ಯಾಯಗಳನ್ನು ಕಂಡುಕೊಳ್ಳದ ಹಿನ್ನೆಲೆಯಲ್ಲಿ ಸರಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು ಹೆಚ್ಚಿಸುತ್ತಲೇ ಇದೆ.ಇದರೆ ಜತೆಗೆ ಇಂಧನ ಮಾರುಕಟ್ಟೆ ಕಂಪನಿ(ಓಎಂಸಿ)ಗಳಾದ ಇಂಡಿಯನ್ ಕಾರ್ಪೊರೇಶನ್ ಲಿ., ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿ., ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿ.,ಗಳು ತಮ್ಮ ಲಾಭಾಂಶಗಳನ್ನು ಹೆಚ್ಚಿಸಿಕೊಂಡಿವೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಾಣಿಸುತ್ತಿಲ್ಲ.ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಧಿಸಿರುವ ತೆರಿಗೆಗಳ ಕಥೆ ಒಂದು ಕಡೆಗಾದರೆ, ಪೆಟ್ರೊಲಿಯಂ ಉತ್ಪನ್ನಗಳ ಮಾರುಕಟ್ಟೆಯೇ ಒಂದು ದೊಡ್ಡ ದಂಧೆ. ಜಗತ್ತಿನಾದ್ಯಂತ ಬಂಗಾರ ಮತ್ತು ಚಿನ್ನಾಭರಣಗಳ 'ಗೋಲ್ಡ್​ ರಶ್​', ಜಾಗತಿಕ ಆರ್ಥಿಕತೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾಗ 'ಪೆಟ್ರೊಲಿಯಂ ರಶ್​', ಮಾಡಿದ್ದು ನೆಪೊಲಿಯನ್​ ಆಫ್​ ಆಯಿಲ್​ ಎಂದೇ ಖ್ಯಾತರಾಗಿರುವ ಹೆನ್ರಿ ಡೆಟರಿಂಗ್​ ಮತ್ತು ಸೆವೆನ್​ ಸಿಸ್ಟರ್ಸ್​. ಕಚ್ಚಾ ತೈಲಗಳು ಬೆಳೆದು ಬಂದ ಹಾದಿ ಮತ್ತು ಸಪ್ತ ಸಹೋದರಿಯರ ಕಥೆ ಈ ಸಂದರ್ಭದಲ್ಲಿ ತಿಳಿಯುವ ಅನಿವಾರ್ಯತೆಯಿದೆ.ಆಂಗ್ಲೋ ಇರಾನಿಯನ್​ ಆಯಿಲ್​ ಕಂಪೆನಿ (ಬಿಪಿ), ಗಲ್ಫ್​ ಆಯಿಲ್​, ರಾಯಲ್​ ಡಚ್​ ಶೆಲ್​, ಸ್ಟಾಂಡರ್ಡ್​ ಆಯಿಲ್​ ಕಂಪೆನಿ ಆಫ್​ ಕ್ಯಾಲಿಫೋರ್ನಿಯಾ, ಸ್ಟಾಂಡರ್ಡ್​ ಆಯಿಲ್​ ಕಂಪೆನಿ ಆಫ್​ ನ್ಯೂ ಜೆರ್ಸಿ, ಸ್ಟಾಂಡರ್ಡ್​ ಆಯಿಲ್​ ಕಂಪೆನಿ ಆಫ್​ ನ್ಯೂ ಯಾರ್ಕ್​ ಮತ್ತು ಟೆಕ್ಸಾಕೋ. ಈ ಏಳು ಸಂಸ್ಥೆಗಳೇ ಇಡೀ ಜಗತ್ತಿನ ಎಲ್ಲಾ ತೈಲ ಉತ್ಪನ್ನಗಳ ಫಲಾನುಭವಿಗಳು ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಬಿಗಿ ಪಟ್ಟು ಹೊಂದಿದವರು. ಇವರ ಬಗೆಗಿನ ವಿಶ್ಲೇಷಾತ್ಮಕ ಲೇಖನ ಶೀಘ್ರದಲ್ಲಿ.

Trending Now