ಎಚ್ಡಿಎಫ್ಸಿ ಬ್ಯಾಂಕ್ ಉಪಾಧ್ಯಕ್ಷ ಶವವಾಗಿ ಪತ್ತೆ; ಸಹೋದ್ಯೋಗಿಗಳ ಮೇಲೆ ಶಂಕೆ ವ್ಯಕ್ತಪಡಿಸಿದ ಪೊಲೀಸರು
webtech_news18 , Advertorial
-ನ್ಯೂಸ್ 18 ಕನ್ನಡಮುಂಬೈ,(ಸೆ.10): ಐದು ದಿನಗಳಿಂದ ನಾಪತ್ತೆಯಾಗಿದ್ದ ಎಚ್ಡಿಎಫ್ಸಿ ಬ್ಯಾಂಕ್ ಉಪಾಧ್ಯಕ್ಷ ಸಿದ್ದಾರ್ಥ್ ಸಾಂಘ್ವಿಯ ಮೃತದೇಹ ಸೋಮವಾರ ಬೆಳಿಗ್ಗೆ ಮುಂಬೈನ ಕಲ್ಯಾಣಿಯಲ್ಲಿ ಪತ್ತೆಯಾಗಿದೆ.
ಸಾಂಘ್ವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ನಡೆಸಲು ಭಾನುವಾರ ಶಂಕಿತ ಆರೋಪಿ ಸರ್ಫರಾಜ್ ಶೈಖ್ನನ್ನು ನವಮುಂಬೈ ಪೊಲೀಸರು ಬಂಧಿಸಿ, ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ತನಿಖೆ ವೇಳೆ ಆತನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆತನ ಹೇಳಿಕೆಯ ಆಧಾರದ ಮೇಲೆ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.ಸಿದ್ದಾರ್ಥ್ ಸಾಂಘ್ವಿಗೆ ಸಿಕ್ಕ ಬಡ್ತಿ ಮತ್ತು ಭತ್ಯೆಯಿಂದ ಆತನ ಸಹೋದ್ಯೋಗಿಗಳು ಅಸೂಯೆಗೊಂಡಿದ್ದರು. ಇದರಿಂದಾಗಿ ಆತನನ್ನು ಕೊಲೆ ಮಾಡಲು ಸಹೋದ್ಯೋಗಿಗಳೇ ಈ ಸಂಚು ನಡೆಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವೃತ್ತಿಪರ ಅಸೂಯೆಯೇ ಸಾಂಘ್ವಿಯ ಕೊಲೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.ಮೂಲಗಳ ಪ್ರಕಾರ, 20 ವರ್ಷದ ಶಂಕಿತ ಆರೋಪಿ ಕ್ಯಾಬ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಸಿದ್ದಾರ್ಥ್ ಸಿಂಘ್ವಿಯನ್ನು ಕೊಲೆ ಮಾಡು ಎಂದು ಯಾರೋ ಒಬ್ಬರು ಹೇಳಿದ್ದರಿಂದ ಈ ಕೊಲೆಯನ್ನು ಮಾಡಿರುವುದಾಗಿ ಆ ಕ್ಯಾಬ್ ಚಾಲಕ ಒಪ್ಪಿಕೊಂಡಿದ್ದಾನೆ. ಸಾಂಘ್ವಿ ಕೆಲಸ ಮುಗಿಸಿ ಕಮಲ ಮಿಲ್ಸ್ ಬಳಿ ಪಾರ್ಕ್ ಮಾಡಿದ್ದ ತನ್ನ ಕಾರಿನ ಬಳಿ ಬಂದಾಗ ಶಂಕಿತ ಆರೋಪಿ ಆತನ ಮೇಲೆ ಆಕ್ರಮಣ ಮಾಡಿ ಕೊಲೆ ಮಾಡಿದ್ದಾನೆ. ಮೊನ್ನೆಯಷ್ಟೇ ನವಮುಂಬೈನಲ್ಲಿ ಸಾಂಘ್ವಿಯ ಕಾರು ಪತ್ತೆಯಾಗಿದ್ದು, ಕಾರಿನ ಹಿಂಬದಿ ಸೀಟಿನಲ್ಲಿ ರಕ್ತದ ಕಲೆಗಳು ಮತ್ತು ಚಾಕು ಕಂಡುಬಂದಿತ್ತು.ದಕ್ಷಿಣ ಮುಂಬೈನ ಮಲಬಾರ್ ಹಿಲ್ ಏರಿಯಾದಲ್ಲಿ ವಾಸವಿದ್ದ ಸಿದ್ದಾರ್ಥ್, ಬುಧವಾರ ಬೆಳಿಗ್ಗೆ 8.30 ರ ಸಮಯದಲ್ಲಿ ಕೆಲಸಕ್ಕೆ ತೆರಳಿದ್ದರು. ಆದರೆ ಮನೆಗೆ ವಾಪಸ್ ಬರಲಿಲ್ಲ ಎಂದು ಆತನ ಹೆಂಡತಿ ಮುಂಬೈನ ಎನ್ ಎಂ ಜೋಶಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಮುಂಬೈ ಪೊಲೀಸರು ಹಂತಕರನ್ನು ಸೆರೆಹಿಡಿಯಲು ಬಲೆ ಬೀಸಿದ್ದರು. ಕಾರಿನಲ್ಲಿ ಪತ್ತೆಯಾಗಿದ್ದ ರಕ್ತದ ಕಲೆ ಸಾಂಘ್ವಿ ಅವರದ್ದಾ ಎಂದು ಖಚಿತಪಡಿಸಿಕೊಳ್ಳಲು, ಆ ರಕ್ತದ ಮಾದರಿಯನ್ನು ಫೋರೆನ್ಸ್ ಪರೀಕ್ಷೆಗೆ ಕಳುಹಿಸಲಾಗಿತ್ತು.ಸಾಂಘ್ವಿ ಕೆಲಸ ಮಾಡುತ್ತಿದ್ದ ಸ್ಥಳ ಕಮಲ ಮಿಲ್ಸ್ ಕಾಂಪೌಂಡ್ ಬಳಿಯಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ತನಿಖಾಧಿಕಾರಿಗಳು ಪರಿಶೀಲಿಸಿದ್ದರು. ಸಾಂಘ್ವಿ ಸಂಜೆ 7.30 ರ ಸಮಯದಲ್ಲಿ ಬ್ಯಾಂಕ್ ಕೆಲಸ ಮುಗಿಸಿ ಪಾರ್ಕಿಂಗ್ ಏರಿಯಾಗೆ ಬಂದಾಗ ಹಂತಕರು ಆತನ ಮೇಲೆ ಆಕ್ರಮಣ ಮಾಡಿದ್ದರು. ಸಾಂಘ್ವಿಯ ಕೊನೆಯ ಮೊಬೈಲ್ ಟವರ್ ಸ್ಥಳವನ್ನು ಟ್ರೇಸ್ ಮಾಡಿದಾಗ, ಸಂಜೆ 7 ಗಂಟೆಗೆ ಕಮಲ ಮಿಲ್ಸ್ ಬಳಿ ತೋರಿಸಿತ್ತು.