ಸಾಯಿಸಬಯಸುವವರಿಗೆ ತಲೆ ಕೊಡುವುದಿಲ್ಲ: 19 ದಿನದ ನಂತರ ಉಪವಾಸ ಕೈಬಿಟ್ಟ ಹಾರ್ದಿಕ್ ಪಟೇಲ್

webtech_news18
- ನ್ಯೂಸ್18 ಕನ್ನಡಅಹ್ಮದಾಬಾದ್(ಸೆ. 12): ಬಿಜೆಪಿ ಸರಕಾರಕ್ಕೆ ತಲೆನೋವಾಗಿರುವ ಪಾಟೀದಾರ್ ಸಮುದಾಯದ ಯುವ ಮುಖಂಡ ಹಾರ್ದಿಕ್ ಪಟೇಲ್ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರವನ್ನು ಕೈಬಿಟ್ಟಿದ್ದಾರೆ. ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ಕೊಡಬೇಕೆಂದು ಹಾಗೂ ಗುಜರಾತ್ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಆಗಸ್ಟ್ 25ರಂದು ಉಪವಾಸ ನಿರಶನ ಪ್ರಾರಂಭಿಸಿದ್ದ ಹಾರ್ದಿಕ್ ಪಟೇಲ್ 19 ದಿನಗಳ ಬಳಿಕ ಪ್ರತಿಭಟನೆ ಸಮಾಪ್ತಿಗೊಳಿಸಿದ್ದಾರೆ. ಆಪ್ತರ ಒತ್ತಾಯಕ್ಕೆ ಕಟ್ಟುಬಿದ್ದು ಇಂದು ಬುಧವಾರ ಮಧ್ಯಾಹ್ನ 3ಗಂಟೆಗೆ ಪಾಟೀದಾರ್ ಮುಖಂಡರಾದ ನರೇಶ್ ಪಟೇಲ್ ಮತ್ತು ಸಿಕೆ ಪಟೇಲ್ ಅವರ ಕೈಯಿಂದ ನಿಂಬೆ ಜ್ಯೂಸ್ ಕುಡಿಯುವ ಮೂಲಕ ಉಪವಾಸವನ್ನು ಅವರು ಅಂತ್ಯಗೊಳಿಸಿದ್ದಾರೆ.


ತಮ್ಮ ಮನೆಯಲ್ಲೇ ಉಪವಾಸ ಪ್ರಾರಂಭಿಸಿದ್ದ ಹಾರ್ದಿಕ್ ಪಟೇಲ್ ಅವರ ಯಾವುದೇ ಬೇಡಿಕೆಗೂ ಕೇಂದ್ರ ಸರಕಾರ ಸ್ಪಂದಿಸಿಲ್ಲ. ಬದಲಾಗಿ ಇದು ಕಾಂಗ್ರೆಸ್ ಪ್ರಾಯೋಜಿತ ಹೋರಾಟ ಎಂದು ಟೀಕಿಸಿತು. ಕೇಂದ್ರದಿಂದ ಪೂರಕ ಸ್ಪಂದನೆ ಬರುವ ಯಾವುದೇ ಸಾಧ್ಯತೆ ಇಲ್ಲದಿದ್ದರಿಂದ ಹತಾಶೆಗೊಂಡ ಹಾರ್ದಿಕ್ ಅವರು ಒಂದು ಹಂತದಲ್ಲಿ ಅನ್ನವಷ್ಟೇ ಅಲ್ಲದೆ ನೀರು ಸೇವಿಸುವುದನ್ನೂ ಕೈಬಿಟ್ಟಿದ್ದರು. ಇದರಿಂದಾಗಿ ಕಳೆದ ವಾರ ಅವರನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಲಾಗಿತ್ತು.ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ ಹಲವು ಮುಖಂಡರು ಹಾರ್ದಿಕ್ ಪಟೇಲ್ ಅವರಿಗೆ ಈ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು. ಹೋರಾಟ ಮಾಡಲು ಪ್ರಾಣ ಮುಖ್ಯ. ದೇಶಕ್ಕೆ ತಮ್ಮಂಥ ಯುವಕರ ಸೇವೆ ಅಗತ್ಯವಿದೆ. ಉಪವಾಸ ಮಾಡಿ ಸಾಯುವಂಥ ಸ್ಥಿತಿಗೆ ಹೋಗಬೇಡಿ ಎಂದು ಅನುಭವಸ್ಥರು ತಿಳಿಹೇಳಿದ್ದರು. ಈ ಹಿನ್ನೆಲೆಯಲ್ಲಿ ಹಾರ್ದಿಕ್ ಪಟೇಲ್ ತಮ್ಮ ಉಪವಾಸದ ಹೋರಾಟವನ್ನು ನಿಲ್ಲಿಸಿದ್ದಾರೆ.“ನನ್ನನ್ನು ಪ್ರೀತಿಸುವ, ಹಾಗೂ ನಾನು ಬದುಕುವುದನ್ನು ನೋಡುವ ಜನರಿಗಾಗಿ ನಾನು ಸಾಯಲು ಸಿದ್ಧ. ಆದರೆ, ನಾನು ಸಾಯುವುದನ್ನು ನೋಡಬಯಸುವವರಿಗೆ ತಲೆಬಾಗುವುದಿಲ್ಲ,” ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.ಹಾರ್ದಿಕ್ ಉಪವಾಸ ಮುಂದುವರಿಸಬೇಕೆಂದಿದ್ದರು. ಆದರೆ, ಉಪವಾಸ ಕೈಬಿಟ್ಟು ಸರಕಾರದ ವಿರುದ್ಧ ಹೋರಾಟ ಮುಂದುವರಿಸಬೇಕೆಂದು ನಾವು ಮಾಡಿಕೊಂಡ ಮನವಿಗೆ ಅವರು ಪೂರಕವಾಗಿ ಸ್ಪಂದಿಸಿದರು ಎಂದು ಪಾಟೀದಾರ್ ಅನಾಮತ್ ಆಂದೋಲನ ಸಮಿತಿಯ ನಾಯಕ ಮನೋಜ್ ಪನರಾ ಹೇಳಿದ್ದಾರೆ.2014ರಲ್ಲಿ ಮೋದಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಗುಜರಾತ್​ನಲ್ಲಿ ಹಾರ್ದಿಕ್ ಪಟೇಲ್ ಅವರು ಪ್ರಬಲ ಮುಖಂಡರಾಗಿ ಬೆಳೆಯುತ್ತಾ ಬಂದಿದ್ದಾರೆ. ಪಾಟೀದಾರ್, ಅಥವಾ ಪಟೇಲ್ ಸಮುದಾಯಕ್ಕೆ ಮೀಸಲಾತಿ ಕೊಡಬೇಕೆಂಬ ಬೇಡಿಕೆ ಇಟ್ಟು ಇಡೀ ಸಮುದಾಯವನ್ನು ಒಗ್ಗಟ್ಟಿನಲ್ಲಿ ತಂದು ನಿಲ್ಲಿಸಿದ್ದಾರೆ. ಬಿಜೆಪಿಯ ಕಟ್ಟಾ ಬೆಂಬಲಿಗರೆಂದು ಗುರುತಿಸಿಕೊಂಡಿದ್ದ ಈ ಸಮುದಾಯವನ್ನು ಈಗ ಬಿಜೆಪಿ ವಿರುದ್ಧವೇ ತಿರುಗಿಬೀಳುವಂತೆ ಮಾಡುತ್ತಿದ್ದಾರೆ. ಇವರ ಮೀಸಲಾತಿ ಹೋರಾಟಕ್ಕೆಬಹುತೇಕ ಇಡೀ ಸಮುದಾಯ ಬೆಂಬಲ ನೀಡಿದೆ. ಇವರ ಸಮಾವೇಶಗಳಿಗೆ ಲಕ್ಷೋಪಲಕ್ಷ ಜನರು ನೆರೆಯುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾರ್ದಿಕ್ ಪಟೇಲ್ ಅವರ ಬೆಂಬಲ ಪಡೆದ ಕಾಂಗ್ರೆಸ್ ಪಕ್ಷವು ಆಡಳಿತಾರೂಢ ಬಿಜೆಪಿಗೆ ತೀವ್ರ ಪೈಪೋಟಿ ನೀಡುವಲ್ಲಿ ಸಫಲವಾಗಿತ್ತು. ಇದು ಗುಜರಾತ್​ನ ಮಾಜಿ ಮುಖ್ಯಮಂತ್ರಿಯೂ ಆಗಿರುವ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಗುಜರಾತ್​ನ ಬಿಜೆಪಿ ಘಟಕಕ್ಕೆ ಜೀರ್ಣಿಸಿಕೊಳ್ಳಲು ಅಗದಂಥ ಸ್ಥಿತಿ ಇದೆ. ಹಾರ್ದಿಕ್ ಪಟೇಲ್ ಅವರ ಶಕ್ತಿಯನ್ನ ಕುಂದಿಸಲು ಬಿಜೆಪಿ ಯತ್ನಿಸಿದಷ್ಟೇ ಅವರು ಹೆಚ್ಚೆಚ್ಚು ಪ್ರತಿರೋಧ ತೋರುತ್ತಿದ್ದಾರೆ ಎಂಬ ಮಾತು ಗುಜರಾತ್ ವಲಯದಲ್ಲಿ ಕೇಳಿಬರುತ್ತಿದೆ.

Trending Now