ಅಮಿತ್ ಶಾ ಅಜೆಂಡಾಕ್ಕೆ ಕಾರ್ಯಕಾರಣಿ ಅಸ್ತು ; 9 ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳಿಗೆ ಹುಡುಕಾಟ

webtech_news18 , Advertorial
- ಧರಣೀಶ್ ಬೂಕನಕೆರೆ,  ನ್ಯೂಸ್ 18 ಕನ್ನಡ ದೆಹಲಿ (ಸೆ.08) : ನವದೆಹಲಿಯಲ್ಲಿ ಇಂದಿನಿಂದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಆರಂಭವಾಗಿದೆ. ಲೋಕಸಭಾ ಚುನಾವಣೆ ಹಾಗೂ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಕಾರ್ಯಕಾರಿಣಿ ಸಭೆ ಬಹಳ ಮಹತ್ವ ಪಡೆದುಕೊಂಡಿದೆ. ಚುನಾವಣಾ ರಣತಂತ್ರ ರೂಪಿಸುವ ಬಗ್ಗೆ ಸಮಗ್ರ ಚರ್ಚೆಗೆ ಇದು ವೇದಿಕೆಯೂ ಆಗಿದೆ.


ಕಾರ್ಯಕಾರಿಣಿಯಲ್ಲಿ ಕಾರ್ಯತಂತ್ರ ರೂಪಿಸುವುದಕ್ಕೇ ಆದ್ಯತೆರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ಮತ್ತು ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ಕಾರ್ಯಕಾರಿಣಿ ಸಭೆಯಲ್ಲಿ ಚುನಾವಣೆಗಳಿಗೆ ಹೇಗೆಲ್ಲಾ ಸಿದ್ದತೆ ನಡೆಸಬೇಕು? ಪ್ರದೇಶವಾರು ರಣತಂತ್ರ ಹೇಗಿರಬೇಕು. ಯಾವ ರೀತಿಯ ಪ್ರಚಾರ ಇರಬೇಕು? ಪಕ್ಷ ಸಂಘಟನೆ ಹೇಗಿರಬೇಕೆಂಬ ಹತ್ತು ಹಲವು ವಿಷಯಗಳನ್ನು ಸುದೀರ್ಘವಾಗಿ ಚರ್ಚಿಸಲಾಗುತ್ತಿದೆ.ಅಮಿತ್ ಶಾ ಅಜೆಂಡಾಕ್ಕೆ ಕಾರ್ಯಕಾರಣಿ ಅಸ್ತುಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಮೊದಲ ಭಾಗವಾದ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಪ್ರಭಾರಿಗಳ ಸಭೆಯನ್ನು ಉದ್ಘಾಟನೆ ಮಾಡಿದ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾರ್ಯಕಾರಿಣಿಯ ಅಜೆಂಡಾವನ್ನು ಬಿಚ್ಚಿಟ್ಟರು. ಈ ವರ್ಷಾಂತ್ಯದಲ್ಲಿ ಬಿಜೆಪಿ ಆಳ್ವಿಕೆಯಲ್ಲಿರುವ ರಾಜಸ್ಥಾನ, ಛತ್ತೀಸಘಡ, ಮಧ್ಯಪ್ರದೇಶ ಇತ್ತೀಚೆಗಷ್ಟೇ ವಿಧಾನಸಭೆ ವಿಸರ್ಜನೆಯಾದ ತೆಲಂಗಾಣ ಹಾಗೂ ಚಿಕ್ಕ ರಾಜ್ಯವಾದ ಮಿಜೋರಾಂ ಚುನಾವಣೆಗಳು ಎದುರಾಗಲಿದ್ದು ಮೊದಲು ಇಲ್ಲಿ ಗೆಲ್ಲಬೇಕು ಎಂಬ ಗುರಿ ನಿಗಧಿಪಡಿಸಿದರು. ಈ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮೋದಿ‌‌ ಮತ್ತೊಮ್ಮೆ ಪ್ರಧಾನಿ ಗದ್ದುಗೆ ಹಿಡಿಯುತ್ತಾರೋ ಇಲ್ಲವೋ ಎಂಬುದನ್ನು ನಿರ್ಧರಿಸಲಿದೆ. ಆದುದರಿಂದ ಈ ವಿಧಾನಸಭಾ ಚುನಾವಣೆಗಳು ಬಹಳ ಮುಖ್ಯ ಎಂಬುದನ್ನೂ ಒತ್ತಿ ಹೇಳಿದರು.‌ ನಂತರ ಈ ರಾಜ್ಯಗಳಲ್ಲಿ ಕಮಲ ಅರಳಿಸೋದು ಹೇಗೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಕೇಂದ್ರ ಸರ್ಕಾರದ ಸಾಧನೆಯೇ ಶ್ರೀರಕ್ಷೆಬೆಳಿಗ್ಗೆ ಅಮಿತ್ ಶಾ, ರಾಜ್ಯಾಧ್ಯಕ್ಷರು ಮತ್ತು ಪ್ರಭಾರಿಗಳ ಸಭೆ ಉದ್ಘಾಟಿಸಿದರೆ ಸಂಜೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿದರು. ಮುಂಬರುವ ಚುನಾವಣೆಗಳನ್ನು ಗೆಲ್ಲಲು ನಮ್ಮ‌ ಸರ್ಕಾರದ ಸಾಧನೆಯೇ ಸಾಧನವಾಗಬೇಕೆಂಬ ಬಗ್ಗೆ ಚರ್ಚೆಯಾಯಿತು. ಮುಖ್ಯವಾಗಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಮುಖವಾಗಿ ಪ್ರಚಾರ ಮಾಡಬೇಕೆಂದು ನಿರ್ಧರಿಸಲಾಯಿತು.ಪಕ್ಷ ಸಂಘಟನೆ ಹಾಗೂ ವಿವಿಧ ರಾಜ್ಯಗಳ ಸಧ್ಯದ ರಾಜಕೀಯ ಸ್ಥಿತಿಗತಿ ಮತ್ತು ಲೋಕಸಭಾ ಚುನಾವಣೆಗೆ ರಾಜ್ಯದ ಸಿದ್ಧತೆ ಬಗ್ಗೆ ಚರ್ಚೆ ನಡೆಸಿದ ಅಮಿತ್ ಷಾ ಎಲ್ಲಾ‌ ರಾಜ್ಯಗಳ ಬಗ್ಗೆಯೂ ಪರಿಶೀಲನೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ರಾಜ್ಯದ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಉಸ್ತುವಾರಿ ಮುರಳಿಧರ್ ರಾವ್ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ನಡೆಸಿರುವ ಸಿದ್ಧತೆ ಬಗ್ಗೆ ವರದಿ ನೀಡಿದರು.ಸಮರ್ಥ ಅಭ್ಯರ್ಥಿಗಳಿಗೆ ಹುಡುಕಾಟರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ಗುರಿ‌ ನಿಗದಿ ಪಡಿಸಿಕೊಂಡಿರುವ ಬಿಜೆಪಿಗೆ ಈಗ ಗೆದ್ದಿರುವ ಕ್ಷೇತ್ರಗಳ ಪೈಕಿ 6 ರಿಂದ 7 ಕಡೆ ಸೋಲುವ ಭೀತಿ ಶುರುವಾಗಿದೆ. ಮೈಸೂರು, ಉತ್ತರ ಕನ್ನಡ, ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಕ್ಷೇತ್ರಗಳಲ್ಲಿ ಇಂಥ ಅಪಾಯ ಕಂಡುಬರುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಲೋಕಸಭಾ ಚುನಾವಣೆಗೂ ಮುಂದುವರೆದರೆ ಗೆಲವು ಇನ್ನಷ್ಟು ಕಠಿಣವಾಗಲಿದೆ. ಹಳೆ ಮೈಸೂರು ಭಾಗದಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ ಎಂಬ ಬಗ್ಗೆ ಸುದೀರ್ಘ ಚರ್ಚೆಯಾಗಿದೆ.ಮೊದಲ ದಿನ ವಯಕ್ತಿಕ ಕಾರಣದಿಂದ ದಿಢೀರನೆ ಬೆಂಗಳೂರಿಗೆ ವಾಪಾಸ್ಸಾಗಿದ್ದ ಯಡಿಯೂರಪ್ಪ ನಾಳಿನ ಕಾರ್ಯಕಾರಿಣಿ ಸಭೆಯಲ್ಲಿ ಹಾಜರಿರಲಿದ್ದಾರೆ. ಅದಕ್ಕೂ ಮಿಗಿಲಾಗಿ ನಾಳೆ ರಾಜ್ಯ ರಾಜಕಾರಣದ ವಿದ್ಯಮಾನಗಳ ಬಗ್ಗೆ ಮತ್ತು ರಾಜ್ಯದಲ್ಲಿ ಈಗಿರುವ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ತರುವ ಬಗ್ಗೆ ಅಮಿತ್ ಶಾ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಮಿತ್ ಶಾ ಕಾಲವಕಾಶ‌ ಕೊಟ್ಟರೆ ರಾಜ್ಯ ರಾಜಕಾರಣದಲ್ಲಿ ಮತ್ತೊಂದಷ್ಟು ಬೆಳವಣಿಗೆಗಳಾಗುವುದು ಗ್ಯಾರಂಟಿ. 

Trending Now