- News18 Kannada
- Last Updated: April 21, 2021, 7:15 PM IST
ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಏಕೆಂದರೆ ಉಭಯ ತಂಡಗಳು ಈಗಾಗಲೇ ಮೂರು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2 ಜಯ 1 ಸೋಲನುಭವಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಜಯ ಲಯ ಮುಂದುವರೆಸುವ ಇರಾದೆಯಲ್ಲಿದ್ದಾರೆ ಧೋನಿ ಪಡೆ. ಹಾಗೆಯೇ ಇಯಾನ್ ಮೋರ್ಗನ್ ಮುನ್ನಡೆಸುತ್ತಿರುವ ಕೆಕೆಆರ್ ತಂಡವು ಮೊದಲ ಪಂದ್ಯವನ್ನು ಹೊರತುಪಡಿಸಿ ಸತತ 2 ಸೋಲನುಭವಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಲು ಕೊಲ್ಕತ್ತಾ ಕಠಿಣ ಪೈಪೋಟಿ ನೀಡಲಿದೆ.
ಐಪಿಎಲ್ನಲ್ಲಿ ಉಭಯ ತಂಡಗಳು ಇದುವೆರೆಗೆ 25 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಬಾರಿ ಗೆಲುವು ದಾಖಲಿಸಿದೆ. ಹಾಗೆಯೇ ಕೊಲ್ಕತ್ತಾ ನೈಟ್ ರೈಡರ್ಸ್ ಸಿಎಸ್ಕೆ ವಿರುದ್ದ 9 ಬಾರಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಒಂದು ಪಂದ್ಯವು ರದ್ದಾಗಿತ್ತು. ಇನ್ನು ಕಳೆದ ಸೀಸನ್ನಲ್ಲಿ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಜಯ ಸಾಧಿಸಿದೆ. ಹಾಗೆಯೇ ಕೊನೆಯ 6 ಪಂದ್ಯಗಳ ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡರೆ ಕೊಲ್ಕತ್ತಾ ನೈಟ್ ರೈಡರ್ಸ್ ಕೇವಲ 2 ಬಾರಿ ಮಾತ್ರ ಜಯ ಸಾಧಿಸಿದೆ. ಹೀಗಾಗಿ ಈ ಅಂಕಿ ಅಂಶಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ಬಲಿಷ್ಠವಾಗಿದೆ ಎಂದೇ ಹೇಳಬಹುದು.
ಇನ್ನು ಸಿಎಸ್ಕೆ-ಕೆಕೆಆರ್ ಕದನದಲ್ಲಿ ಮಿಂಚಿದ ಆಟಗಾರರು ಯಾರು ಎಂದು ನೋಡುವುದಾದರೆ, ಸುರೇಶ್ ರೈನಾ ಅಗ್ರಸ್ಥಾನದಲ್ಲಿದ್ದಾರೆ. ರೈನಾ ಕೊಲ್ಕತ್ತಾ ವಿರುದ್ದ 736 ರನ್ ಬಾರಿಸಿದ್ದಾರೆ. ನಂತರದ ಸ್ಥಾನದಲ್ಲಿರುವುದು ಮಹೇಂದ್ರ ಸಿಂಗ್ ಧೋನಿ. ಸಿಎಸ್ಕೆ ನಾಯಕ ಕೆಕೆಆರ್ ವಿರುದ್ದ 482 ರನ್ ಕಲೆಹಾಕಿದ್ದಾರೆ. ಇದಾಗ್ಯೂ ಕೆಕೆಆರ್ ತಂಡದ ಯಾವುದೇ ಬ್ಯಾಟ್ಸ್ಮನ್ ಇದುವರೆಗೆ ಸಿಎಸ್ಕೆ ವಿರುದ್ದ 400 ರನ್ ಕಲೆಹಾಕಿಲ್ಲ ಎಂಬುದು ವಿಶೇಷ.
ಅದೇ ರೀತಿ ಪ್ರಸ್ತುತ ತಂಡದಲ್ಲಿರುವ ಬೌಲರುಗಳ ಪ್ರದರ್ಶನ ನೋಡುವುದಾದರೆ, ಸುನೀಲ್ ನರೈನ್ ಸಿಎಸ್ಕೆ ವಿರುದ್ದ 15 ವಿಕೆಟ್ ಕಬಳಿಸಿದ್ದಾರೆ. ಅತ್ತ ಕೆಕೆಆರ್ ವಿರುದ್ದ 15 ವಿಕೆಟ್ ಪಡೆಯುವ ಮೂಲಕ ರವೀಂದ್ರ ಜಡೇಜಾ ಕೂಡ ಮಿಂಚಿದ್ದಾರೆ.
ಇನ್ನು ಇಂದಿನ ಪಂದ್ಯದಲ್ಲಿ ಸಿಎಸ್ಕೆ ಪರ ಡ್ವೇನ್ ಬ್ರಾವೊ ಸ್ಥಾನದಲ್ಲಿ ವೇಗಿ ಲುಂಗಿ ಎನ್‌ಗಿಡಿ ಸ್ಥಾನ ಪಡೆದಿದ್ದು, ಹಾಗೆಯೇ ಕೆಕೆಆರ್ ತಂಡದಲ್ಲಿ ಶಕೀಬ್ ಅಲ್ ಹಸನ್ ಬದಲು ಸುನಿಲ್ ನರೈನ್ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಇಂದಿನ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಬದಲು ಕೆಕೆಆರ್ ತಂಡದಲ್ಲಿ ಕಮಲೇಶ್ ನಾಗರ್ಕೋಟಿ ಸ್ಥಾನ ಪಡೆದಿದ್ದಾರೆ.
ಉಭಯ ತಂಡಗಳು ಹೀಗಿವೆ:
ಕೋಲ್ಕತಾ ನೈಟ್ ರೈಡರ್ಸ್: ನಿತೀಶ್ ರಾಣಾ, ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯಾನ್ ಮೋರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರ್ಕೋಟಿ, ಸುನಿಲ್ ನರೈನ್, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್.ಧೋನಿ (ನಾಯಕ), ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ಲುಂಗಿ ಎನ್‌ಗಿಡಿ, ದೀಪಕ್ ಚಹರ್