ಯಶಸ್ವಿ ಕನ್ನಡ ಚಲನಚಿತ್ರ ಕಪ್: ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ ಕಿಚ್ಚ ಸುದೀಪ್

webtech_news18 , Advertorial
-ನ್ಯೂಸ್ 18 ಕನ್ನಡಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ ಪಂದ್ಯಾಟದ ಎರಡನೇ ಆವೃತ್ತಿ ಭಾನುವಾರ ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ಈ ಬಾರಿ ಸ್ಯಾಂಡಲ್​ವುಡ್​ ನಟರೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರು ಬ್ಯಾಟ್ ಬೀಸಿದ್ದು ವಿಶೇಷವಾಗಿತ್ತು. ಕಿಚ್ಚ ಸುದೀಪ್ ಅವರ ಕನಸಿನ ಕೂಸಾಗಿದ್ದ ಈ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಿದ್ದರಲ್ಲಿ ಸಂಶಯವೇ ಇಲ್ಲ.


ಕಳೆದ ಬಾರಿಗಿಂತ ಈ ಬಾರಿ ಪ್ರೇಕ್ಷಕರನ್ನು ಸೆಳೆಯಲು ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರನ್ನು ಕರೆಸುವಲ್ಲಿ ಸುದೀಪ್ ಮತ್ತು ಕನ್ನಡ ಚಿತ್ರರಂಗ ಯಶಸ್ವಿಯಾಗಿತ್ತು. 6 ತಂಡಗಳಿಗಾಗಿ ಆ್ಯಡಮ್ ಗಿಲ್​ಕ್ರಿಸ್ಟ್​, ತಿಲಕರತ್ನೆ ದಿಲ್ಶಾನ್, ಒವೈಸ್ ಶಾ, ಹರ್ಷಲ್ ಗಿಬ್ಸ್ ಮತ್ತು ವಿರೇಂದ್ರ ಸೆಹ್ವಾಗ್ ಬ್ಯಾಟ್ ಬೀಸಿ ಪಂದ್ಯಗಳ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದ್ದರು.ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳನ್ನು ಮತ್ತು ಅಂತರಾಷ್ಟ್ರೀಯ ಆಟಗಾರರನ್ನು ಒಂದೇ ವೇದಿಕೆಯಡಿಯಲ್ಲಿ ಸೇರಿಸುವ ಕೆಲಸ ಯಶಸ್ವಿಯಾಗಿರುವುದಕ್ಕೆ ಕಿಚ್ಚ ಸುದೀಪ್ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಪಂದ್ಯಗಳ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಾಲಿವುಡ್ ನಟರುಗಳಾದ ಸುನಿಲ್ ಶೆಟ್ಟಿ ಮತ್ತು ಸೊಹೈಲ್ ಖಾನ್​ಗೆ ಟ್ವಿಟ್ ಮೂಲಕ ಅಭಿನಯ ಚಕ್ರವರ್ತಿ ಧನ್ಯವಾದ ತಿಳಿಸಿದ್ದಾರೆ.

ಮೈದಾನದಲ್ಲಿ ಬೆವರಿಳಿಸಿದ ರಾಕ್​ಸ್ಟಾರ್ ರೋಹಿತ್​ಗೆ ವಿಶೇಷ ಕೃತಜ್ಞತೆ ಸಲ್ಲಿಸಿದ ಸುದೀಪ್, ಪ್ರತಿತಂಡದ ನಾಯಕರುಗಳಾದ ಶಿವಣ್ಣ, ಪುನೀತ್, ಉಪೇಂದ್ರ, ಯಶ್ ಮತ್ತು ಗಣೇಶ್​ ಅವರ ಸಹಕಾರ ಹಾಗೂ ಬೆಂಬಲಕ್ಕೆ ಧನ್ಯವಾದವನ್ನು ಅರ್ಪಿಸಿದ್ದಾರೆ. ಹಾಗೆಯೇ ಅಂತರಾಷ್ಟ್ರೀಯ ಕ್ರಿಕೆಟರುಗಳಾದ ಆ್ಯಡಮ್ ಗಿಲ್​ಕ್ರಿಸ್ಟ್​, ತಿಲಕರತ್ನೆ ದಿಲ್ಶಾನ್, ಒವೈಸ್ ಶಾ, ಹರ್ಷಲ್ ಗಿಬ್ಸ್ ಮತ್ತು ವಿರೇಂದ್ರ ಸೆಹ್ವಾಗ್​ಗೆ ಥ್ಯಾಂಕ್ಸ್​ ತಿಳಿಸಿ ಮತ್ತೆ ಭೇಟಿಯಾಗುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮೈದಾನದಲ್ಲಿ ಸ್ಟಾರುಗಳನ್ನು ಹುರಿದುಂಬಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿ ನಿಮ್ಮ ಬೆಂಬಲಕ್ಕೆ ನಾವು ಚಿರಋಣಿಯಾಗಿರುತ್ತೇವೆಂದು ತಿಳಿಸಿದ್ದಾರೆ.

ಗೋಲ್ಡನ್ ಗಣೇಶನಿಗೆ ಚತುರ್ಥಿ ಬೋನಸ್
ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಫೈನಲ್​​ನಲ್ಲಿ ಮುಖಾಮುಖಿಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜಸ್ ಹಾಗೂ ಯಶ್ ಮುಂದಾಳತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಪಂದ್ಯದಲ್ಲಿ ಗಣಿ ಹುಡುಗರು ಗೋಲ್ಡನ್ ಆಟ ಆಡಿ ವಿಜಯಲಕ್ಷ್ಮೀಯನ್ನು ಒಲಿಸಿಕೊಂಡಿದ್ದಾರೆ. ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯಶ್ ಟೀಂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ವಿಕೆಟ್‍ಗೆ ಸ್ಟಾಲಿನ್ ಹೂವರ್ ಹಾಗೂ ರಾಜೀವ್ ಉತ್ತಮ ಆರಂಭ ಒದಗಿಸಿದರು. ಹೂವರ್ 33 ರನ್ ಹಾಗೂ ರಾಜೀವ್ 14 ರನ್ ಕಲೆಹಾಕಿ ಔಟಾದರೆ, ಕೃಷ್ಣ 19 ರನ್​​ಗಳಿಸಿದರು. ಇದರ ನಡುವೆ ಕೊನೆಯ ಓವರ್​ಗಳಲ್ಲಿ ಅಬ್ಬರಿಸಿದ ಓವೈಸ್ ಶಾ ತಂಡದ ಸ್ಕೋರನ್ನು 100ರ ಗಡಿ ದಾಟಿಸಿದರು. ಕೊನೆಯ ಓವರ್ ಒಂದರಲ್ಲೇ 30ರನ್ ಸಿಡಿಸಿದರು. ಓವೈಸ್​​ರ ಅಜೇಯ 42ರನ್‍ಗಳ ನೆರವಿನಿಂದ ರಾಷ್ಟ್ರಕೂಟ ಪ್ಯಾಂಥರ್ಸ್ 6 ವಿಕೆಟ್ ನಷ್ಟಕ್ಕೆ 122 ರನ್ ಕಲೆಹಾಕಿತು.123 ರನ್ ಟಾರ್ಗೆಟ್ ಬೆನ್ನತ್ತಿದ ಒಡೆಯರ್ಸ್ ಚಾರ್ಜಸ್ ಪರ ಶ್ರೀಲಂಕಾದ ಮಾಜಿ ಕ್ರಿಕೆಟಿಗ ತಿಲಕರತ್ನೆ ದಿಲ್ಶಾನ್ ಅಬ್ಬರಿಸಿದರು. ಮಿಂಚಿನ ಆಟವಾಡಿದ ಲಂಕಾ ಆಟಗಾರ ಬೌಂಡರಿ ಸಿಕ್ಸರ್​ಗಳ ಮಳೆ ಸುರಿಸಿದರು. ಕೊನೆಯ ಎಸೆತದಲ್ಲಿ 2 ರನ್‍ಗಳು ಬೇಕಿದ್ದಾಗ, ಕಳೆದೆರಡು ಪಂದ್ಯದಲ್ಲಿ ಮ್ಯಾಚ್ ಫಿನಿಶ್ ಮಾಡಿದ್ದ ರಿತೇಶ್ ಭಟ್ಕಳ್ ಮತ್ತೊಮ್ಮೆ ಸಿಕ್ಸರ್ ಸಿಡಿಸಿ ಒಡೆಯರ್ ತಂಡಕ್ಕೆ ಗೆಲುವು ತಂದುಕೊಟ್ಟರು. ದಿಲ್ಶಾನ್ ಪಂದ್ಯದ ಹೀರೋ ಆಗಿ ಮಿಂಚಿದರು. ಯಶ್ ಬಳಗ ನಿರಾಸೆಯಿಂದ ಪೆವಿಲಿಯನ್ ಸೇರಿಕೊಂಡರೆ, ಕೆಸಿಸಿ ಸೀಸನ್ 2 ಗೆದ್ದ ಗಣೇಶ್ ತಂಡ ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು. ಈ ಮೂಲಕ ಚತುರ್ಥಿಗೆ ಮುನ್ನವೇ ಗೋಲ್ಡನ್ ಸ್ಟಾರ್ ಗಣೇಶ ಭರ್ಜರಿ ಉಡುಗೊರೆ ಪಡೆದುಕೊಂಡರು.

Trending Now