ಕನ್ನಡ ಚಲನಚಿತ್ರ ಕಪ್ ಫೈನಲ್​​: ಗೋಲ್ಡನ್ ಆಟವಾಡಿ ಗೆದ್ದು ಬೀಗಿದ ಗಣಿ ಟೀಂ

webtech_news18 , Advertorial
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡಈ ಬಾರಿಯ ಕನ್ನಡ ಚಲನಚಿತ್ರ ಕಪ್ ಫೈನಲ್​​ನಲ್ಲಿ ಮುಖಾಮುಖಿಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜಸ್ ಹಾಗೂ ಯಶ್ ಮುಂದಾಳತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಪಂದ್ಯದಲ್ಲಿ ಗಣಿ ಹುಡುಗರು ಗೋಲ್ಡನ್ ಆಟ ಆಡಿ ವಿಜಯಲಕ್ಷ್ಮೀಯನ್ನು ಒಲಿಸಿಕೊಂಡಿದ್ದಾರೆ.


ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯಶ್ ಟೀಂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ವಿಕೆಟ್‍ಗೆ ಸ್ಟಾಲಿನ್ ಹೂವರ್ ಹಾಗೂ ರಾಜೀವ್ ಉತ್ತಮ ಆರಂಭ ಒದಗಿಸಿದರು. ಹೂವರ್ 33 ರನ್ ಹಾಗೂ ರಾಜೀವ್ 14 ರನ್ ಕಲೆಹಾಕಿ ಔಟಾದರೆ, ಕೃಷ್ಣ 19 ರನ್​​ಗಳಿಸಿದರು. ಇದರ ನಡುವೆ ಕೊನೆಯ ಓವರ್​ಗಳಲ್ಲಿ ಅಬ್ಬರಿಸಿದ ಓವೈಸ್ ಶಾ ತಂಡದ ಸ್ಕೋರನ್ನು 100ರ ಗಡಿ ದಾಟಿಸಿದರು. ಕೊನೆಯ ಓವರ್ ಒಂದರಲ್ಲೇ 30ರನ್ ಸಿಡಿಸಿದರು. ಓವೈಸ್​​ರ ಅಜೇಯ 42ರನ್‍ಗಳ ನೆರವಿನಿಂದ ರಾಷ್ಟ್ರಕೂಟ ಪ್ಯಾಂಥರ್ಸ್ 6 ವಿಕೆಟ್ ನಷ್ಟಕ್ಕೆ 122 ರನ್ ಕಲೆಹಾಕಿತು. 123 ರನ್ ಟಾರ್ಗೆಟ್ ಬೆನ್ನತ್ತಿದ ಒಡೆಯರ್ಸ್ ಚಾರ್ಜಸ್ ಪರ ಶ್ರೀಲಂಕಾದ ಮಾಜಿ ಕ್ರಿಕೆಟಿಗ ತಿಲಕರತ್ನೆ ದಿಲ್‍ಷ್ಯಾನ್ ಅಬ್ಬರಿಸಿ ಬೊಬ್ಬಿರಿದು ಬಿಟ್ಟರು. ಮಿಂಚಿನ ಆಟವಾಡಿದ ದಿಲ್‍ಷ್ಯಾನ್ ಬೌಂಡರಿ ಸಿಕ್ಸರ್​ಗಳ ಮಳೆ ಸುರಿಸಿದರು. ಕೊನೆಯ ಎಸೆತದಲ್ಲಿ 2 ರನ್‍ಗಳು ಬೇಕಿದ್ದಾಗ, ಕಳೆದೆರಡು ಪಂದ್ಯದಲ್ಲಿ ಮ್ಯಾಚ್ ಫಿನಿಶ್ ಮಾಡಿದ್ದ ರಿತೇಶ್ ಭಟ್ಕಳ್ ಮತ್ತೊಮ್ಮೆ ಸಿಕ್ಸರ್ ಸಿಡಿಸಿ ಒಡೆಯರ್ ತಂಡಕ್ಕೆ ಗೆಲುವು ತಂದುಕೊಟ್ಟರು. ದಿಲ್‍ಷ್ಯಾನ್ ಪಂದ್ಯದ ಹೀರೋ ಆಗಿ ಮಿಂಚಿದರು.ಯಶ್ ಬಳಗ ನಿರಾಸೆಯಿಂದ ಪೆವಿಲಿಯನ್ ಸೇರಿಕೊಂಡರೆ, ಕೆಸಿಸಿ ಸೀಸನ್ 2 ಗೆದ್ದ ಗಣೇಶ್ ತಂಡ ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು. ಈ ಮೂಲಕ ಕರ್ನಾಟಕ ಚಲನಚಿತ್ರ ಕಪ್ ಸೀಸನ್ 2ಗೆ ತೆರೆಬಿದ್ದಿತು. ಕೆಸಿಸಿ ಟೂರ್ನಮೆಂಟ್ ರೂವಾರಿ ಕಿಚ್ಚ ಸುದೀಪ್ ಯಶಸ್ಸಿನ ಖುಷಿಯಲ್ಲಿ ತೇಲಾಡಿದರು. ಜೊತೆಗೆ ಅಂತರಾಷ್ಟ್ರೀಯ ತಾರೆಗಳೊಂದಿಗೆ ಆಡಿದ ಅನುಭವ ಸ್ಯಾಂಡಲ್‍ವುಡ್​​ನ ಸ್ಟಾರ್​ಗಳಿಗೆ ಎಂದಿಗೂ ಮರೆಯದ ನೆನಪಿನ ಬುತ್ತಿಯನ್ನು ಕೊಟ್ಟಿದೆ.

Trending Now