ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

Telangana: ತೆಲಂಗಾಣದಲ್ಲಿ ಕೋವಿಡ್​ನಿಂದ ಸಾವನ್ನಪ್ಪಿದ ಹಿಂದೂ ವ್ಯಕ್ತಿಗೆ ಮುಸ್ಲಿಂ ಸಹೋದರರಿಂದ ಅಂತ್ಯಕ್ರಿಯೆ!

Coronavirus Death: ಕೋವಿಡ್‌ - 19 ನಿಂದ ಬಲಿಯಾದ ಹಿಂದೂ ವ್ಯಕ್ತಿಯ ಮೃತದೇಹದ ಅಂತ್ಯಸಂಸ್ಕಾರವನ್ನು ಇಬ್ಬರು ಮುಸ್ಲಿಂ ಸಹೋದರರು ನೆರವೇರಿಸಿದ್ದಾರೆ. ಈ ಘಟನೆ ತೆಲಂಗಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿದ್ದು, ಹಲವರು ಇವರನ್ನು ಶ್ಲಾಘಿಸಿದ್ದಾರೆ.

ಕೊರೋನಾ ವೈರಸ್‌ ಜಗತ್ತಿನೆಲ್ಲೆಡೆ ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ವಿಶ್ವದೆಲ್ಲೆಡೆ ಬಾಧಿಸುತ್ತಿದೆ. ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಇನ್ನು, ಈ ವೇಳೆ ಕೆಲವರಿಗಂತೂ ಮಾನವೀಯತೆ ಹೆಚ್ಚಾಗಿರುವ ಹಾಗಿದೆ. ಈ ಸ್ವಾರ್ಥ ಜಗತ್ತಿನಲ್ಲೂ ಕೆಲವೆಡೆ ಮಾನವೀಯತೆ ಇನ್ನೂ ಬದುಕಿದೆ ಅನ್ನೋದು ಹಲವೆಡೆ ಬೆಳಕಿಗೆ ಬರುತ್ತಿದೆ. ಇದೇ ರೀತಿ, ತೆಲಂಗಾಣದಲ್ಲೂ ಕೋವಿಡ್‌ - 19 ನಿಂದ ಬಲಿಯಾದ ಹಿಂದೂ ವ್ಯಕ್ತಿಯ ಮೃತದೇಹದ ಅಂತ್ಯಸಂಸ್ಕಾರವನ್ನು ಇಬ್ಬರು ಮುಸ್ಲಿಂ ಸಹೋದರರು ನೆರವೇರಿಸಿದ್ದಾರೆ. ಈ ಘಟನೆ ತೆಲಂಗಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿದ್ದು, ಹಲವರು ಇವರನ್ನು ಶ್ಲಾಘಿಸಿದ್ದಾರೆ.


ಇಬ್ಬರು ಯುವ ಮುಸ್ಲಿಂ ಸಹೋದರರು ತೆಲಂಗಾಣದಲ್ಲಿ ಕೊರೋನಾ ವೈರಸ್‌ನಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಮೃತ ದೇಹದ ಅಂತಿಮ ವಿಧಿಗಳನ್ನು ನೆರವೇರಿಸಿದರು. ಈ ಘಟನೆ ರಾಜ್ಯದ ಪೆಡ್ಡಾ ಕೊಡಪಾಗಲ್ ಮಂಡಲದ ಕೇಟೆಪಲ್ಲಿ ಗ್ರಾಮದಲ್ಲಿ ನಡೆದಿದೆ. ಕೋವಿಡ್‌ - 19 ನಿಂದ ಬಲಿಯಾದವರ ಸಂಖ್ಯೆ ದಿನೇ ದಿನೇ ಏರುತ್ತಿದ್ದು, ಸ್ಮಶಾನದಲ್ಲಿ ಮೃತದೇಹಗಳು ತುಂಬಿ ಹೋಗಿವೆ. ಇನ್ನು, ಸಂಬಂಧಿಕರು ಸಹ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವಿಲ್ಲದ ಅಥವಾ ಮಾಡಲು ಇಷ್ಟಪಡದ ಘಟನೆಗಳು ವರದಿಯಾಗಿದ್ದು, ಈ ನಡುವೆ ಇಬ್ಬರು ಮುಸಲ್ಮಾನರು ಕೋವಿಡ್‌ನಿಂದ ಬಲಿಯಾದ ವ್ಯಕ್ತಿಯ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿಸಿ ಕೋಮು ಸೌಹಾರ್ದತೆ ಮೆರೆದಿದ್ದಾರೆ.


ಮೊಘುಲಿಯಾ ಎಂಬ ವ್ಯಕ್ತಿ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು ಹಾಗೂ ಕೋವಿಡ್‌ ಪಾಸಿಟಿವ್‌ ಬಂದಿತ್ತು. ಕೊರೋನಾ ರೋಗನಿರ್ಣಯದ ನಂತರ, ಅವರನ್ನು ಭನ್ಸುವಾಡಾದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು ಆದರೆ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು. ಅವರ ನಿಧನದ ನಂತರ, ಮೊಘುಲಿಯಾ ಅವರ ಕುಟುಂಬ ಸದಸ್ಯರು ತಮಗೂ ಕೋವಿಡ್‌ ತಗುಲುವ ಭೀತಿಯಿಂದ ಮೃತದೇಹದ ಹತ್ತಿರ ಹೋಗಲು ಹಾಗೂ ಅಂತ್ಯ ಸಂಸ್ಕಾರ ಮಾಡಲು ತಿರಸ್ಕರಿಸಿದರು.


ಆ ಸಮಯದಲ್ಲಿ ಶಫಿ ಮತ್ತು ಅಲಿ ಎಂಬ ಇಬ್ಬರು ಸಹೋದರರು ಮೃತ ವ್ಯಕ್ತಿಯ ಅಂತಿಮ ವಿಧಿಗಳನ್ನು ನೆರವೇರಿಸಲು ಮುಂದಾದರು. ಮೊಘುಲಿಯಾ ಅವರೊಂದಿಗೆ ಯಾವುದೇ ರಕ್ತ ಸಂಬಂಧವಿಲ್ಲದಿದ್ದರೂ, ಆಂಬ್ಯುಲೆನ್ಸ್ ವೊಂದನ್ನು ನಿರ್ವಹಿಸುತ್ತಿದ್ದ ಸಹೋದರರು ಆತನ ಮೃತದೇಹವನ್ನು ಹತ್ತಿರದ ಹಿಂದೂ ಶವಾಗಾರಕ್ಕೆ ತಮ್ಮ ಆಸ್ಪತ್ರೆಯಲ್ಲಿ ಸಾಗಿಸಿದರು. ಹಿಂದೂ ಆಚರಣೆಗಳ ಪ್ರಕಾರವೇ ಇಬ್ಬರು ಮುಸಲ್ಮಾನರು ಅಂತಿಮ ವಿಧಿಗಳನ್ನು ಸಹ ಮಾಡಿದರು.

ಈ ಹಿನ್ನೆಲೆ ಇಬ್ಬರೂ ಸಹೋದರರ ನಿಸ್ವಾರ್ಥ ಸೇವೆಗೆ ಅನೇಕ ಸ್ಥಳೀಯರು ಆಶ್ಚರ್ಯ ಮತ್ತು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕರುಣೆಯ ಕೃತ್ಯವನ್ನು ಕೋಮು ಸೌಹಾರ್ದತೆಯ ಗೆಲುವು ಎಂದು ಪರಿಗಣಿಸಲಾಗುತ್ತಿದೆ.

Published by: Sushma Chakre
First published: April 21, 2021, 12:29 PM IST