- News18 Kannada
- Last Updated: April 21, 2021, 12:20 PM IST
ಬೆಂಗಳೂರು(ಏ. 21): ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನ ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕು. ಹೀಗೆ ಮಾಡಿದರೆ 14 ದಿನದಲ್ಲಿ ಕೊರೋನಾ ಸೋಂಕಿನ ಚೈನ್ ಲಿಂಕ್ ಮುರಿಯಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅಭಿಪ್ರಾಯಪಟ್ಟರು. ವೈಜ್ಞಾನಿಕ ನೆಲಗಟ್ಟಿನಲ್ಲಿ ಅಧ್ಯಯನ ಮಾಡಿ ತಜ್ಞರು ನೀಡಿರುವ ಸಲಹೆ ಪ್ರಕಾರ ಸರ್ಕಾರ ಮಾರ್ಗಸೂಚಿಗಳನ್ನ ಹೊರತಂದಿದೆ. ಜನರು ಇವುಗಳನ್ನ ಗಂಭೀರವಾಗಿ ಪರಿಗಣಿಸಿ ಪಾಲನೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಹೊಸ ಮಾರ್ಗಸೂಚಿಗಳನ್ನ ಕಟ್ಟುನಿಟ್ಟು ಪಾಲನೆ ಮಾಡುವುದರಿಂದ ಮೂರ್ನಾಲ್ಕು ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಲಿದೆ. ಜನರು ಭಯ ಪಡುವ ಅಗತ್ಯ ಇಲ್ಲ. ಸೋಂಕಿತರಾದವರೆಲ್ಲರೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ. ಯಾರು ಆಸ್ಪತ್ರೆಗೆ ದಾಖಲಾಗಬೇಕು, ಯಾರು ದಾಖಲಾಗಬಾರದು ಎಂದು ಇಂದು ಸಂಜೆ ವಿವರವಾಗಿ ಹೇಳುತ್ತೇನೆ ಎಂದು ಡಾ. ಸುಧಾಕರ್ ಹೇಳಿದರು.
ಈ ಹದಿನಾಲ್ಕು ದಿನಗಳ ಅವಧಿಯಲ್ಲಿ ರಾಜ್ಯದ ವೈದ್ಯಕೀಯ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತೇವೆ. ರೆಮ್ಡೆಸಿವಿರ್ ಚುಚ್ಚುಮದ್ದು, ಐಸಿಯು ಬೆಡ್, ಆಕ್ಸಿಜನ್ ಇತ್ಯಾದಿ ಸೌಲಭ್ಯಗಳ ಲಭ್ಯತೆಯನ್ನು ಹೆಚ್ಚಿಸುತ್ತೇವೆ. ಸಕ್ರಿಯ ಸೋಂಕಿತರಿಗೆ ಸೂಕ್ತ ರೀತಿಯ ಚಿಕಿತ್ಸೆ ಕೊಡುವುದಕ್ಕೆ ಗಮನ ಹರಿಸುತ್ತೇವೆ ಎಂದವರು ತಿಳಿಸಿದರು.
ಇದನ್ನೂ ಓದಿ: DK Shivakumar: ಕೊರೋನಾದಿಂದ ಜನರನ್ನು ದೇವರೇ ಕಾಪಾಡಬೇಕು; ಬಿಜೆಪಿ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ಲೇವಡಿ
ಕೊರೋನಾ ಅತಿ ಹೆಚ್ಚು ಬಾಧಿಸುತ್ತಿರುವ ಬೆಂಗಳೂರಿನಲ್ಲಿ ಎಂಟು ವಲಯಗಳಲ್ಲಿ ಉಸ್ತುವಾರಿ ಸಚಿವರು ನೇತೃತ್ವ ವಹಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆ ಒದಗಿಸುವ ವ್ಯವಸ್ಥೆಯನ್ನ ಸಚಿವರು ನಿಭಾಯಿಸುತ್ತಾರೆ. ನಾನ್ ಕೋವಿಡ್ ರೋಗಿಗಳನ್ನ ಡಿಸ್ಜಾರ್ಜ್ ಮಾಡಿ ಕೋವಿಡ್ ರೋಗಿಗಳಿಗೆ ಬೆಡ್ ಹೆಚ್ಚಿಸುವ ಕೆಲಸ ಮಾಡುತ್ತಾರೆ. ಹಾಗೆಯೇ, ಎಂಟು ವಲಯಗಳಲ್ಲಿ ಕೋವಿಡ್ನಿಂದ ಮೃತಪಟ್ಟವರ ದಹನಕ್ಕಾಗಿ ಎಂಟು ಸ್ಮಶಾನಗಳನ್ನ ಗುರುತಿಸಲಾಗಿದೆ ಎಂದು ಆರೋಗ್ಯ ಸಚಿವರು ಭರವಸೆ ನೀಡಿದರು.
ಇಂದು ಸಹ ಕಂದಾಯ ಸಚಿವರು ಮತ್ತು ಗೃಹ ಸಚಿವರ ಜೊತೆ ಸಭೆ ನಡೆಸಲಾಗುತ್ತದೆ. ಸೋಂಕು ಹೆಚ್ಚಿರುವ ಐದು ಜಿಲ್ಲೆಗಳ ಡಿಸಿಗಳ ಜೊತೆಯೂ ಇಂದು ಸಭೆ ನಡೆಯುತ್ತದೆ. ಸೋಂಕು ಹೆಚ್ಚಿರುವ ಏಳು ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ. ನಾಳೆ ಇಡೀ ದಿನ ಮೈಸೂರಿನಲ್ಲಿ ಇರುತ್ತೇನೆ ಎಂದು ಡಾ. ಕೆ ಸುಧಾಕರ್ ಮಾಹಿತಿ ಕೊಟ್ಟರು.
ಕೋವಿಡ್ ರೋಗಿಗಳ ಚಿಕಿತ್ಸೆಗೆ ಅಗತ್ಯವಾಗಿರುವ ರೆಮ್ಡೆಸಿವರ್ ಇಂಜೆಕ್ಷನ್ ಕೊರತೆ ಆಗಿರುವ ಬಗ್ಗೆ ಮಾತನಾಡಿದ ಸುಧಾಕರ್, ರಾಜ್ಯಕ್ಕೆ ಈಗ 23 ಸಾವಿರ ರೆಮ್ಡೆಸಿವರ್ ಚುಚ್ಚುಮದ್ದುಗಳು ಬಂದಿವೆ. ಸರ್ಕಾರಿ ಆಸ್ಪತ್ರೆಗಳಿಗೆ 10 ಸಾವಿರ ರೆಮ್ಡೆಸಿವರ್ ಸಿಕ್ಕರೆ, ಖಾಸಗಿ ಆಸ್ಪತ್ರೆಗಳಿಗೆ 13 ಸಾವಿರದಷ್ಟನ್ನು ಪೂರೈಸಲಾಗಿದೆ. ಕೇವಲ 10 ಸಾವಿರ ರೆಮ್ಡೆಸಿವರ್ಗಳನ್ನು ಮಾತ್ರ ಹೊರ ರಾಜ್ಯಗಳಿಗೆ ಕೊಡಲಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡರು.
ಇದನ್ನೂ ಓದಿ: Bangalore Coronavirus: ಬೆಂಗಳೂರಿನಲ್ಲಿ ಇಂದು 15 ಸಾವಿರ ದಾಟುತ್ತಾ ಕೊರೋನಾ ಕೇಸ್?; ಊರುಗಳತ್ತ ವಲಸೆ ಹೊರಟ ಕಾರ್ಮಿಕರು
ನಿನ್ನೆ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ. ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಕೇಸ್ಗಳು ದಾಖಲಾಗಿರುವುದು. ಬೆಂಗಳೂರಿನಲ್ಲೂ ಸೋಂಕು ನಾಗಾಲೋಟದಲ್ಲಿ ವ್ಯಾಪಿಸಿದ್ದು, ನಿನ್ನೆ ಒಂದೇ ದಿನ ದಾಖಲಾದ ಕೋವಿಡ್ ಪ್ರಕರಣಗಳು 13 ಸಾವಿರದ ಗಡಿ ದಾಟಿವೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಎಲ್ಲಾ ಮಾರ್ಗಗಳ ಬಗ್ಗೆ ಅವಲೋಕನ ಮಾಡಲಾಯಿತು. ಅದರಂತೆ 14 ದಿನಗಳ ಕಾಲ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ನೈಟ್ ಕರ್ಫ್ಯೂ ಅವಧಿ ವಿಸ್ತರಣೆ, ವೀಕೆಂಡ್ ಕರ್ಫ್ಯೂ ಸೇರಿ ಹಲವು ಕ್ರಮಗಳನ್ನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ವರದಿ: ಸಂಜಯ್ ಎಂ ಹುಣಸನಹಳ್ಳಿ